ಭಾಗಮಂಡಲ, ಮಾ. 10: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ವರ್ಷಂಪ್ರತಿ ಜರುಗುವ ಚಿನ್ನತಪ್ಪ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ನಿನ್ನೆ ಬೆಳಿಗ್ಗೆ ಬೆಳಗಿನ ಹಬ್ಬದೊಂದಿಗೆ ಉತ್ಸವ ಆರಂಭಗೊಂಡಿತು. ಕುಲದೇವರ ದರ್ಶನಕ್ಕೆ ವರ್ಷಗಳಿಂದ ಕಾತರರಾಗಿದ್ದ ಗ್ರಾಮಸ್ಥರು ಹಾಗೂ ವಿವಿಧ ಭಾಗಗಳಿಂದ ದೇವಾಲಯಕ್ಕೆ ಆಗಮಿಸಿದ ಭಕ್ತರು ಕೃಷ್ಣನ ಕೊಳಲಿನ ನಾದವನ್ನು ಆಲಿಸಿದರು. ದೇವಸ್ಥಾನದಿಂದ ಚಿಂಗಂಡ ಶಿವಾಜಿ ಅವರು ದೇವಾಲಯದಿಂದ ಕೊಳಲನ್ನು ತೆಗೆದು ದೇವಾಲಯದ ಮುಂಭಾಗ ಕೊಳಲನ್ನು ನುಡಿಸಿದರು. ಭಕ್ತರು ದೇವರ ದರ್ಶನ ಪಡೆದುಕೊಂಡರು. ನಿರ್ದಿಷ್ಟ ಜಾಗಗಳಲ್ಲಿ ಕೊಳಲನ್ನು ನುಡಿಸಿ ಬಳಿಕ ದೇವಾಲಯಕ್ಕೆ ಹಿಂತಿರುಗಿಸಲಾಯಿತು. ಸಂಜೆ 7 ಗಂಟೆಗೆ ಸಮೀಪದ ಕಲ್ಲುಹೊಳೆಗೆ ತೆರಳಿದ ಮಂದಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಬೆಳಗಿನ ಜಾವ 2ಗಂಟೆ ವೇಳೆಗೆ ಧಾರಾಪೂಜೆ ನೆರವೇರಿತು. ಮಧ್ಯಾಹ್ನ 1.10ಕ್ಕೆ ಸರಿಯಾಗಿ ದೇವಾಲಯದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆಯಲಾಯಿತು. ಚಿಂಗಂಡ ಶಿವಾಜಿ ಕೊಳಲನ್ನು ಎತ್ತಿಕೊಂಡು ನಿರ್ದಿಷ್ಟ ಜಾಗಗಳಲ್ಲಿ ಮೂರು ಬಾರಿ ನುಡಿಸುತ್ತಾ ಬಂದು ಊರ ಮಂದ್‍ಗೆ ಆಗಮಿಸಿದರು. ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಯಿತು. ಭಕ್ತರು ವಿವಿಧ ಆಚರಣೆಯಲ್ಲಿ ಪಾಲ್ಗೊಂಡು ಪುನೀತರಾದರು.ಇದೇ ಸಂದರ್ಭ ಶುದ್ಧಮುದ್ರಿಕೆಯಲ್ಲಿದ್ದ ಕೆಲವು ಭಕ್ತರಿಗೆ ಗರುಡ ಕಾಣಿಸಿಕೊಂಡಿತು. ಬಳಿಕ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತು ಪೋರಾಟದೊಂದಿಗೆ ಹೊರಟ ಶ್ವೇತವಸ್ತ್ರಧರಿಸಿದ ಮಹಿಳೆಯರು ಊರಮಂದ್‍ಗೆ ಆಗಮಿಸಿದರು. ಬಳಿಕ ಊರಮಂದ್‍ನ ಗದ್ದೆಯಲ್ಲಿ ಮೂರು ಸುತ್ತು ಎತ್ತು ಪೋರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು. ಬಳಿಕ ಸಂಪ್ರದಾಯದಂತೆ ಹೊಳೆಯಲ್ಲಿ ಮೀನಿಗೆ ಅಕ್ಕಿ ಹಾಕುವ ಕಾರ್ಯಕ್ರಮ ಜರುಗಿತು.

(ಮೊದಲ ಪುಟದಿಂದ)

ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ತಾ.11 ರಂದು (ಇಂದು) ಭಂಡಾರ ಹಾಕುವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಕಳೆದ ಬಾರಿ ಬಿದ್ದಂಡ ಹರೀಶ್ ಕೊಳಲು ನುಡಿಸಿದರೆ ಈ ಬಾರಿ ಚಿಂಗಂಡ ಶಿವಾಜಿ ಶ್ರೀಕೃಷ್ಣನ ವೇಷ ಧರಿಸಿ ಕೊಳಲನ್ನು ನುಡಿಸಿದರು. ಅಯ್ಯಂಗೇರಿ ಗ್ರಾಮದ ಅಧಿಕ ಸಂಖ್ಯೆಯ ಭಕ್ತರೊಂದಿಗೆ ಗ್ರಾಮದ 12 ಕುಳದವರು ಭಾಗಿಯಾಗಿದ್ದರು. ಉತ್ಸವದಲ್ಲಿ ತಕ್ಕರಾಗಿ ಬಿದ್ದಿಯಂಡ ಸುಭಾಷ್ ಕಾರ್ಯನಿರ್ವಹಿಸಿದರು.

-ಸುನಿಲ್ ಕುಯ್ಯಮುಡಿ