ಶನಿವಾರಸಂತೆ, ಮಾ. 10: ಸಮೀಪದ ದುಂಡಳ್ಳಿ ಗ್ರಾ.ಪಂ.ಯ 2018ನೇ ಸಾಲಿನ ವಿವಿಧ ಆದಾಯ ಮೂಲದ ಮಳಿಗೆಗಳ ವಾರ್ಷಿಕ ಬಹಿರಂಗ ಹರಾಜು ಪ್ರಕ್ರಿಯೆ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಕುರಿ ಮಾಂಸ, ಹಂದಿ ಮಾಂಸ ಹಾಗೂ ಹಸಿ ಮೀನು ಮಾರಾಟ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಹಂದಿ ಮಾಂಸ ಮಾರಾಟ ಮಳಿಗೆಯ ಹರಾಜಿನಲ್ಲಿ ಗ್ರಾ.ಪಂ. ಆಡಳಿತ ಮಂಡಳಿ ನಿರೀಕ್ಷೆ ಮಾಡಿದ ಮೊತ್ತಕ್ಕೆ ಬಿಡ್ಡುದಾರರು ಕೂಗದ ಹಿನ್ನೆಲೆ ಹಂದಿ ಮಾಂಸ ಮಾರಾಟ ಮಳಿಗೆಯ ಹರಾಜು ಪ್ರಕ್ರಿಯೆಯನ್ನು ತಾ. 15 ಕ್ಕೆ ಮುಂದೂಡಲಾಯಿತು. ಉಳಿದಂತೆ ಕುರಿ ಮಾಂಸ ಮಾರಾಟ ಮಳಿಗೆ ರೂ. 80 ಸಾವಿರಕ್ಕೆ ಹರಾಜಾಯಿತು. ಆದರೆ ಕಳೆದ ವರ್ಷ ರೂ. 1 ಲಕ್ಷ 65 ಸಾವಿರಕ್ಕೆ ಹರಾಜಾಗಿತ್ತು. ಇದರಿಂದ ಗ್ರಾ.ಪಂ.ಗೆ ಈ ವರ್ಷದ ಹರಾಜಿನಲ್ಲಿ ಕುರಿ ಮಾಂಸ ಮಾರಾಟ ಮಳಿಗೆಯಿಂದ ರೂ. 85 ಸಾವಿರ ಆದಾಯ ಕಡಿಮೆಯಾದಂತಾಗಿದೆ. ಹಸಿ ಮೀನು ಮಾರಾಟ ಮಳಿಗೆ ರೂ. 65 ಸಾವಿರಕ್ಕೆ ಹರಾಜಾಯಿತು. ಕಳೆದ ವರ್ಷ ಇದೇ ಮಳಿಗೆ ರೂ. 23 ಸಾವಿರಕ್ಕೆ ಹರಾಜಾಗಿತ್ತು. ಈ ವರ್ಷ ಹಸಿ ಮೀನು ಮಾರಾಟ ಮಳಿಗೆಯಿಂದ ರೂ. 42 ಸಾವಿರ ಲಾಭಗಳಿಸಿದಂತಾಗಿದೆ.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ರೂಪ, ಗ್ರಾ.ಪಂ. ಸದಸ್ಯರುಗಳು, ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಹಾಜರಿದ್ದರು.