ಮಡಿಕೇರಿ, ಮಾ. 10: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಅವರು ಮಾಹಿತಿ ಪಡೆದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರು, ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿ ಸಿದ್ಧತೆ, ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್, ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಹೊಸ ಮತದಾರರ ಪಟ್ಟಿ ಪ್ರಕಟ, ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸುವದು. ಹೊಸ ಮತದಾರರಿಗೆ ಚುನಾವಣೆ ಗುರುತಿನ ಚೀಟಿ ನೀಡುವುದು, ಸರ್ಕಾರಿ ಸೇವೆಯಲ್ಲಿರುವವರು ಅಂಚೆಮತ ಪತ್ರದ ಮೂಲಕ ಮತ ಚಲಾಯಿಸುವಂತಾಗಲು ಮಾಹಿತಿ ನೀಡುವದು ಮತ್ತಿತರ ಬಗ್ಗೆ ಮಾಹಿತಿ ಪಡೆದರು.

ಚುನಾವಣಾ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳ ನಿಯೋಜನೆ, ವಲ್ನರಬಲ್ ಪ್ರದೇಶ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವದು. ಅರಣ್ಯ ಪ್ರದೇಶದಲ್ಲಿರುವ ಮತಗಟ್ಟೆ ಕೇಂದ್ರಗಳಲ್ಲಿ ದೂರವಾಣಿ ಸಂಪರ್ಕ ಅಥವಾ ವಯರ್‍ಲೆಸ್ ಸೇವೆ ಕಲ್ಪಿಸುವದು. ಅರಣ್ಯ ಪ್ರದೇಶದ ಮತಗಟ್ಟೆ ನಿಯೋಜಿಸುವ ಸಿಬ್ಬಂದಿಗಳಿಗೆ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಮಾಡುವದು, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಸ್ಥಳ ಗುರುತಿಸುವದು. ಮತಗಟ್ಟೆಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರ್ಯಾಂಪಿಂಗ್ ವ್ಯವಸ್ಥೆ ಮಾಡುವದು ಮತ್ತಿತರ ಚುನಾವಣೆಗೆ ಸಂಬಂಧಿಸಿದಂತೆ ಹಲವು ಸಲಹೆ, ಮಾರ್ಗದರ್ಶನ ಮಾಡಿದರು.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲು ಪಟ್ಟಿ ಮಾಡಿಕೊಳ್ಳುವದು. ಜೊತೆಗೆ ಚುನಾವಣೆಗೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳುವದು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳುವಂತೆ ಪ್ರಾದೇಶಿಕ ಆಯುಕ್ತರಾದ ಶಿವಯೋಗಿ ಕಳಸದ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ, ರಾಜಕೀಯ ಪಕ್ಷದ ಮುಖಂಡರೊಂದಿಗೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ವಿದ್ಯುನ್ಮಾನ ಮತ ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ, ನೂತನ ಮತದಾರರ ಪಟ್ಟಿ ಪ್ರಕಟಿಸ ಲಾಗಿದೆ. ಮತಗಟ್ಟೆ ಕೇಂದ್ರಗಳನ್ನು ಗುರ್ತಿಸಲಾಗಿದ್ದು, ಈ ಕೇಂದ್ರಗಳಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ತರಿಸಿಕೊಳ್ಳಲಾಗಿದೆ. ಜೊತೆಗೆ ಚುನಾವಣಾಧಿಕಾರಿಗಳಿಗೆ ತರಬೇತಿ ನಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಲ್ನರಬಲ್ ಪ್ರದೇಶವನ್ನು ಗುರುತಿಸ ಲಾಗಿದ್ದು, ಅಂತ ಪ್ರದೇಶಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗುವದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರು, ಸ್ಟಾರ್ ಪ್ರಚಾರಕರು ಜಿಲ್ಲೆಗೆ ಆಗಮಿಸುವ ಸಂದರ್ಭ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡುವದು, ಜೊತೆಗೆ ಹೆಲಿಪ್ಯಾಡ್ ಸ್ಥಳ ಗುರುತಿಸುವದು ಮತ್ತಿತರ ವಿಚಾರಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಾಹಿತಿ ಪಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಾಲ್ಫ್ ಮೈದಾನ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಇದೆ ಎಂದು ತಿಳಿಸಿದರು. ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವದಡಿ ಈಗಾಗಲೇ ಮತದಾನದ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಡಾ. ನಂಜಂಡೇ ಗೌಡ ದಿಡ್ಡಳಿ ಗಿರಿಜನರು ಈಗಾಗಲೇ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಗೆ ವರ್ಗಾವಣೆಯಾಗಿದ್ದು, ಹೊಸದಾಗಿ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಜೊತೆಗೆ ಹಳೆ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಯಲಾಗಿದೆ ಎಂದು ತಿಳಿಸಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ತಹಶೀಲ್ದಾರರಾದ ಕುಸುಮ, ಗೋವಿಂದ ರಾಜು, ಮಹೇಶ್, ಚುನಾವಣಾ ಶಿರಾಸ್ತೆದಾರ್ ಅರುಣ್ ಸಾಗರ್, ಪ್ರಕಾಶ್, ಅನಿಲ್ ಕುಮಾರ್ ಇತರರು ಹಲವು ಮಾಹಿತಿ ನೀಡಿದರು.

ಸೆಕ್ಟರ್ ಅಧಿಕಾರಿಗಳ ಸಭೆ: ವಿಧಾನಸಭಾ ಚುನಾವಣೆ ಸಂಬಂಧಿಸಿ ದಂತೆ ಸೆಕ್ಟರ್ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ, ವಿಧಾನಸಭೆ ಚುನಾವಣೆಯಲ್ಲಿ ಕಾರ್ಯದಕ್ಷತೆ ಹಾಗೂ ಪಾರದರ್ಶ ಕತೆಯಿಂದ ಕಾರ್ಯನಿರ್ವಹಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದೊಂದು ಚುನಾವಣೆ ಯಲ್ಲಿಯೂ ಸಹ ಹೊಸತನವನ್ನು ಕಲಿಯುವಂತದ್ದು ಇರುತ್ತದೆ. ಆದ್ದರಿಂದ ಭಯಮುಕ್ತವಾಗಿ ಹಾಗೂ ನಿಸ್ಪಕ್ಷಪಾತವಾಗಿ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು ಮುಂದಾಗಬೇಕಿದೆ ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೆಕ್ಟರ್ ಅಧಿಕಾರಿಗಳ ಕರ್ತವ್ಯ ಹಾಗೂ ಚುನಾವಣಾ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತಿತರ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ವಲ್ನರೆಬಲ್ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯ ಪಾಲನೆ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಸಿಇಓ ಪ್ರಶಾಂತ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಸೆಕ್ಟರ್ ಅಧಿಕಾರಿಗಳು ಇತರರು ಇದ್ದರು.