ಶನಿವಾರಸಂತೆ, ಮಾ. 10: ಅಂಗನವಾಡಿ ಮಕ್ಕಳ ಮೊದಲ ಹಂತದ ಶಿಕ್ಷಣವಾಗಿದ್ದು, ಪೋಷಕರು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾದ ಎಡೆಹಳ್ಳಿ ಗ್ರಾಮದ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಸರಕಾರದ ಯೋಜನೆಯನ್ವಯ ಅಂಗನವಾಡಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಆಶಾ ಕಾರ್ಯಕರ್ತೆಯರ ಮಾರ್ಗದರ್ಶನ ದಲ್ಲಿ ಶಿಕ್ಷಕಿಯರು, ಪೋಷಕರು ಮಕ್ಕಳ ಬೆಳವಣಿಗೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿ ಶ್ರಮಿಸಬೇಕೆಂದರು.
ಮಾಜಿ ಸಚಿವ ಜೀವಿಜಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಕೆ. ಶೀಲಾ, ಪಿ.ಎಸ್.ಐ. ಮರಿಸ್ವಾಮಿ, ಇಂಜಿನಿಯರ್ ಸಲೀಂ, ಪಂಚಾಯಿತಿ ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಎನ್.ಕೆ. ಸುಮತಿ, ಬಿಂದಮ್ಮ, ಮನು ಹರೀಶ್, ನೇತ್ರಾವತಿ, ಕಮಲಮ್ಮ, ಪಾರ್ವತಮ್ಮ, ಸಂತೋಷ್, ರಕ್ಷಿತ್, ಯೋಗೇಂದ್ರ, ಪಿ.ಡಿ.ಓ. ವೇಣುಗೋಪಾಲ್, ಲೆಕ್ಕಾಧಿಕಾರಿ ದೇವರಾಜ್, ಶಿಕ್ಷಕಿ ಪದ್ಮಾ ಮತ್ತಿತರರು ಉಪಸ್ಥಿತರಿದ್ದರು.