ಮಡಿಕೇರಿ, ಮಾ. 10: ಕಡಗದಾಳುವಿನ ಶ್ರೀ ಬೊಟ್ಲಪ್ಪ ಯುವ ಸಂಘದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು. ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಸಿದ್ದಾಪುರದ ಟಿ.ಕೆ. ರ್ಯಾಂಬೋ ಪ್ರಥಮ, ಎಡಪಾಲ ತಂಡ ದ್ವಿತೀಯ ಮತ್ತು ಕಡಗದಾಳಿನ ರಾಹುಲ್ ಫ್ರೆಂಡ್ಸ್ ತಂಡ ತೃತೀಯ ಬಹುಮಾನಗಳನ್ನು ಪಡೆಯಿತು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಡಗದಾಳು ಗ್ರಾಮದಲ್ಲಿನ ನಿವೃತ್ತ ಮತ್ತು ಸೇವೆ ಸಲ್ಲಿಸುತ್ತಿರುವ ಯೋಧರನ್ನು ಮತ್ತು ಸ್ವರ್ಗಸ್ಥರಾದ ನಿವೃತ್ತ ಯೋಧರ ಪತ್ನಿಯರನ್ನು ಸನ್ಮಾನಿಸಲಾಯಿತು. ನಂತರ ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವಿಶೇಷವಾಗಿ ಕೋಲಾರದ ಭದ್ರೇಶ್ ಅವರಿಂದ ಜಾದೂ ಪ್ರದರ್ಶನ ಏರ್ಪಡಿಸಲಾಗಿತ್ತು.

ದ್ವಿತೀಯ ದಿನ ಗ್ರಾಮದ ಮುಖ್ಯ ಬೀದಿಗಳಲ್ಲಿ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಪೂಜಾ ಕುಣಿತ ಮಹಿಳೆಯರ ಕಲಶದೊಂದಿಗೆ ಮೆರವಣಿಗೆ ಮನರಂಜಿಸಿತು. ಇದರ ಉದ್ಘಾಟನೆಯನ್ನು ಬಿ.ಡಿ. ನಾರಾಯಣ ರೈ, ಟಿ.ವಿ. ವಾಸು ನೆರವೇರಿಸಿದರು.

ಆ ದಿನ ಸಂಜೆ ಕಡಗದಾಳು ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿ, ಇಂತಹ ಯುವ ಸಂಘಗಳು ಉತ್ತಮವಾಗಿ ಸೇವೆ ಸಲ್ಲಿಸಿದಾಗ ಗ್ರಾಮದ ಅಭಿವೃದ್ಧಿ ತನ್ನಿಂತಾನೆ ಆಗುತ್ತದೆ. ಯುವ ಶಕ್ತಿಯೇ ರಾಷ್ಟ್ರಶಕ್ತಿ ಎಂದರು.

25ನೇ ವರ್ಷದ “ಬೆಳ್ಳಿ ಬೆಳಕು 1993-2018”ರ ಮುಖಪುಟ ಅನಾವರಣ ಮಾಡಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, 25 ವರ್ಷ ಸಂಘವನ್ನು ಮುನ್ನಡೆಸಿ ಕೊಂಡು ಹೋದುದಕ್ಕಾಗಿ ಅಭಿನಂದಿಸಿದರು.

ಸಮಾರೋಪ ಭಾಷಣ ಮಾಡಿದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಅತ್ಯಂತ ಕುಗ್ರಾಮವಾಗಿದ್ದ ಬೊಟ್ಲಪ್ಪ ಪ್ರದೇಶವು ಯುವ ಸಂಘದ ಸ್ಥಾಪನೆಯ ನಂತರ ಹಂತ ಹಂತವಾಗಿ ಅಭಿವೃದ್ಧಿಯನ್ನು ಕಂಡಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನಿಲ್ ಸುಬ್ರಮಣಿ ಮಾತನಾಡಿ, ಪ್ರಾಕೃತಿಕವಾದ ಪರಿಸರದಲ್ಲಿ ಈ ಯುವ ಸಂಘವು ಬೆಳೆದಿದ್ದು, ಸೇವೆ ಅಮೋಘವಾಗಿದೆ ಎಂದರು.

ತಾ.ಪಂ. ಸದಸ್ಯ ರವೀಂದ್ರ ಶುಭ ಹಾರೈಸಿದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸರ್ಕಾರ ನೀಡಿದ ಯೋಜನೆಗಳ ಕಾಮಗಾರಿಗಳನ್ನು ಯಶಸ್ವಿಯಾಗಿ ಯುವ ಸಂಘದ ಮುಖಾಂತರ ವಿನಿಯೋಗವಾಗಿದೆ ಎಂದರು.

ಯುವ ಸಂಘದ ಅಧ್ಯಕ್ಷ ಸಿ.ಕೆ ಮಂಜು, ಕನ್ನಡ ಸಂಸ್ಕøತಿ ಇಲಾಖೆಯ ಮಂಜೂರು ಮಂಜುನಾಥ ಇದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಿ.ಎಸ್. ಜಯಪ್ಪ ಸ್ವಾಗತಿಸಿದರು. ಬಿ.ಎಂ. ದೇವಾನಂದ ವಂದಿಸಿದರು. ಮಾದೇಟಿರ ಪಿ. ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಜಯಪ್ಪ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕಲಾ ತಂಡಗಳ ಮತ್ತು ಗೀತಗಾಯನ ಕಾರ್ಯಕ್ರಮ ನಡೆಯಿತು.

ಸುಳ್ಯದ ಪಟ್ಟಾಭಿರಾಮ್ ಅವರಿಂದ ಹಾಸ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು.