ಮಡಿಕೇರಿ, ಮಾ. 10: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಏ. 6,7,8 ರಂದು ವೀರಾಜಪೇಟೆಯ ತಾಲೂಕು ಮೈದಾನದಲ್ಲಿ 10ನೇ ವರ್ಷದ ಹೊನಲು ಬೆಳಕಿನ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ವೈ.ಎ. ಹನೀಫ್, ಏ. 6 ರಂದು ಮಧ್ಯಾಹ್ನ 3 ಗಂಟೆಗೆ ಪಂದ್ಯಾವಳಿ ಉದ್ಘಾಟನೆಯಾಗಲಿದ್ದು, ಜಿಲ್ಲಾ ವ್ಯಾಪ್ತಿಯ ಜಮಾಅತ್‍ಗಳಿಂದ ತಲಾ ಒಂದರಂತೆ ತಂಡಗಳು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದರು. ತಂಡದ ಸದಸ್ಯರು ಆಯಾ ಜಮಾಅತ್ ಸದಸ್ಯರಾಗಿರಬೇಕೆಂದು ಸ್ಪಷ್ಟಪಡಿಸಿದ ಅವರು, ಕಳೆದ ಸಾಲಿನಲ್ಲಿ 45 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 65 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನಾಕ್‍ಔಟ್ ಮಾದರಿಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. 33,333, ದ್ವಿತೀಯ ರೂ. 22,222, ತೃತೀಯ ರೂ. 11,111 ಹಾಗೂ ನಾಲ್ಕನೇ ಬಹುಮಾನವಾಗಿ ರೂ. 5,555 ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವದೆಂದರು. ಏ. 8 ರಂದು ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ರಂಗದ ಪ್ರಮುಖರು ಭಾಗವಹಿಸಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತರನ್ನು ಸನ್ಮಾನಿಸಲಾಗುವದು ಎಂದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್‍ನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್, ನಿರ್ದೇಶಕರಾದ ಎಂ.ಎ. ಮನ್ಸೂರ್‍ಆಲಿ ಹಾಗೂ ನಾಸಿರ್ ಮಕ್ಕಿ ಉಪಸ್ಥಿತರಿದ್ದರು.