ಮಡಿಕೇರಿ ಮಾ.10 : ವಸತಿ ಹೀನ ಆದಿವಾಸಿಗಳಿಗೆ ವಸತಿ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಘಟಕ ತಾ.12 ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ವೈ.ಕೆ. ಗಣೇಶ್ ಜಿಲ್ಲಾ ವ್ಯಾಪ್ತಿಯ ಹಾಡಿಗಳಲ್ಲಿ, ಲೈನ್ ಮನೆಗಗಳಲ್ಲಿ ಹತ್ತು ಸಾವಿರಕ್ಕು ಹೆಚ್ಚಿನ ನಿರ್ವಸತಿಗರಿದ್ದಾರೆ. ನಿರಾಶ್ರಿತರಿಗೆ ವಸತಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರು ಆಡಳಿತ ವ್ಯವಸ್ಥೆಯಿಂದ ಸೂಕ್ತ ಸ್ಪಂದನ ದೊರಕಿಲ್ಲವೆಂದು ಆರೋಪಿಸಿದರು.

ತಾ.12 ರಂದು ಬೆಳಗ್ಗೆ 11 ಗಂಟೆಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು. ಮುಂದಿನ 15 ದಿನಗಳೊಳಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜೈಲ್ ಬರೋ ಚಳುವಳಿ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.

ಹಾಡಿ, ಕಾಲೋನಿ, ಪೈಸಾರಿ ಎನ್ನುವ ಹೆಸರಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕೊಡಗಿನ ಆದಿವಾಸಿ ಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೋಟದ ಲೈನ್ ಮನೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಕಡಿಮೆ ಕೂಲಿಗೆ ಆದಿವಾಸಿಗಳು ದುಡಿಯುತ್ತಿದ್ದಾರೆ. ಮಾಲೀಕ ನೀಡಿದ ಸಾಲದ ಕುಣಿಕೆಗೆ ಜೋತು ಬಿದ್ದ ಆದಿವಾಸಿಗಳು ಜೀತಕ್ಕೂ ಒಳಗಾಗಿದ್ದಾರೆ ಎಂದು ಗಣೇಶ್ ಆರೋಪಿಸಿದರು.