ಸಿದ್ದಾಪುರ, ಮಾ.10: ಸಿಟಿ ಬಾಯ್ಸ್ ಯುವಕ ಸಂಘ ಆಯೋಜಿಸುತ್ತಿರುವ ಕೆಸಿಎಲ್ ಕ್ರೀಡಾಕೂಟವು ಕಳೆದೆರಡು ವರ್ಷ ಗಳಿಂದ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದೆ ಎಂದು ಗ್ರಾ.ಪಂ ಅಧ್ಯಕ್ಷ ಎಂ.ಕೆ ಮಣಿ ಅಭಿಪ್ರಾಯಪಟ್ಟರು.ಇಲ್ಲಿನ ಗ್ರಾಪಂ ಸಭಾಂಗಣದಲ್ಲಿ ನಡೆದ ಸಿಟಿ ಬಾಯ್ಸ್ ಯುವಕ ಸಂಘದ ಐಪಿಎಲ್ ಮಾದರಿಯ ಕೊಡಗು ಚಾಂಪಿಯನ್ಸ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಡೆಯುವ ಎಲ್ಲಾ ರೀತಿಯ ಕ್ರೀಡಾಕೂಟಗಳು ಸಹಬಾಳ್ವೆ ಸಾರುವದರೊಂದಿಗೆ ಅನ್ಯೋನ್ಯತೆ ಯನ್ನು ವೃದ್ಧಿಸುತ್ತದೆ. ಜಿಲ್ಲೆಯ ಪ್ರತಿಭಾನ್ವಿತ ಆಟಗಾರರಿಗೆ ಅದ್ಭುತ ಅಡಿಪಾಯವನ್ನು ಕೆಸಿಎಲ್ ಮೂಲಕ ಒದಗಿಸಿರುವದು ಈ ನಾಡಿನ ಹೆಮ್ಮೆಯಾಗಿದೆ ಎಂದು ಅಭಿಪ್ರಾಯಿಸಿ ದರು. ಕೆಸಿಎಲ್ ಮೂರನೇ ಆವೃತ್ತಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭ ಕೆಸಿಎಲ್ ಪ್ರಚಾರ ಸಮಿತಿ ಅಧ್ಯಕ್ಷ (ಮೊದಲ ಪುಟದಿಂದ) ರೆಜಿತ್ ಕುಮಾರ್ ಗುಹ್ಯ, ಕ್ರೀಡಾಕೂಟ ಸಮಿತಿ ಅಧ್ಯಕ್ಷ ಸುರೇಶ್ ಬಿಳಿಗೇರಿ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್ ವಾಸು, ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್, ಪ್ರಮುಖರಾದ ಡೈಮಂಡ್ ಜಂಶೀದ್, ಕಲೀಲ್, ಸತೀಶ್ ಸೇರಿದಂತೆ ಇತರರು ಇದ್ದರು.

ಆಟಗಾರರ ಬಿಡ್ಡಿಂಗ್: ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 12 ತಂಡಗಳ ಮಾಲೀಕರು ಭಾಗವಹಿಸುವ ಮೂಲಕ 23 ಐಕಾನ್ ಆಟಗಾರರನ್ನು ಹರಾಜು ಮಾಡಿದರು. ನೆಲ್ಯಹುದಿಕೇರಿಯ ರೋನಿತ್, ಹುಂಡಿಯ ರಿಯಾಜ್, ಸೋಮವಾರಪೇಟೆಯ ಯತೀಶ್, ಸಿದ್ದಾಪುರದ ಮುಸ್ತಫ, ವೀರಾಜಪೇಟೆಯ ಷಂಶುದ್ದೀನ್, ಮೂರ್ನಾಡಿನ ಮೂರ್ತಿ, ಹೊಸಳ್ಳಿಯ ಪ್ರಭಾಕರ್ ಮತ್ತು ಹಂಚಿಕಾಡಿನ ನಿತೇಶ ಸೇರಿದಂತೆ ಕೆಲವು ಆಟಗಾರರಿಗಾಗಿ ತಂಡಗಳ ಮಾಲೀಕರು ಹೆಚ್ಚು ಪೈಪೋಟಿ ನಡೆಸಿದ್ದು ಕಂಡು ಬಂತು.

ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸಲು 271 ಆಟಗಾರರು ಅರ್ಜಿ ಸಲ್ಲಿಸಿದ್ದು, ಅಂತಿಮ ಹಂತದ ಆಟಗಾರರ ಹರಾಜು ಪ್ರಕ್ರಿಯೆ ತಾ. 13 ರಂದು ಸಿದ್ದಾಪುರದ ಚರ್ಚ್ ಸಭಾಂಗಣದಲ್ಲಿ ನಡೆಯಲಿದ್ದು, ಏಪ್ರಿಲ್ 8 ರಿಂದ 12ರ ವರೆಗೆ ಐದು ದಿನಗಳ ಕಾಲ ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಕ್ರಿಕೆಟ್ ಉತ್ಸವ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಎಂ.ಎ ಅಜೀಜ್ ತಿಳಿಸಿದರು.