ಸಿದ್ದಾಪುರ, ಮಾ.10: ‘ತಿಂಡಿಗೆ ತೆರಳಿದ ನಮ್ಮಪ್ಪ ಸಾವಾಗಿ ಬಂದೆಯಲ್ಲಪ್ಪ...’ ಎಂದು ಗೋಳಾಡುತ್ತಾ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಶುಕ್ರವಾರದಂದು ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಸಿ.ಟಿ. ಪೊನ್ನಪ್ಪನವರಿಗೆ ಸೇರಿದ ಕಾಫಿ ತೋಟದಲ್ಲಿ ಒಂಟಿ ಸಲಗಕ್ಕೆ ಬಲಿಯಾದ ರುದ್ರಪ್ಪನವರು ದಿನನಿತ್ಯ ಕೆಲಸ ಮುಗಿಸಿದ ಬಳಿಕ ಸಂಜೆ ಮಕ್ಕಳಿಗೆ ತಿಂಡಿ ಪದಾರ್ಥಗಳನ್ನು ತರಲು ಅಂಗಡಿಗೆ ಹೋಗುತ್ತಿದ್ದರು ಎಂದು ಮೃತ ರುದ್ರಪ್ಪನವರ ಪುತ್ರಿ ಹೇಮಾ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಳು. ಎಂದಿನಂತೆ ರುದ್ರಪ್ಪ ಚೆನ್ನಯ್ಯನಕೋಟೆ ಅಂಗಡಿಗೆ ತೆರಳಿ ತನ್ನ ಮಕ್ಕಳಿಗೆ ತಿಂಡಿ ಖರೀದಿಸಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ರಸ್ತೆಯ ಮಧ್ಯದಲ್ಲಿ ಒಂಟಿ ಸಲಗವೊಂದು ಏಕಾಏಕಿ ಧಾಳಿ ನಡೆಸಿ ರುದ್ರಪ್ಪನನ್ನು ಸೊಂಡಿಲಿನಿಂದ ಎತ್ತಿ ಚರಂಡಿಗೆ ಎಸೆದಿದೆ. ನಂತರ ಸಲಗವು ಆಕ್ರೋಶದಿಂದ ಘೀಳಿಡುತ್ತಿರುವ ಶಬ್ದದಿಂದ ಎಚ್ಚರಗೊಂಡ ಕಾರ್ಮಿಕರು ಕೂಡಲೇ ರಸ್ತೆಯ ಸಮೀಪಕ್ಕೆ ಬಂದು ನೋಡಿದಾಗ ರುದ್ರಪ್ಪ ದಾರುಣವಾಗಿ ಮೃತಪಟ್ಟಿರುವದು ಕಂಡುಬಂದಿದೆ. ರುದ್ರಪ್ಪ ತನ್ನ ಸಂಸಾರದೊಂದಿಗೆ ಸಾಲಿಗ್ರಾಮದಿಂದ ಬಂದು ಕಳೆದ 13 ವರ್ಷಗಳಿಂದ ಸಿ.ಟಿ. ಪೊನ್ನಪ್ಪನವರ ತೋಟದ ಲೈನ್ ಮನೆಯಲ್ಲಿ ವಾಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ವರ್ಷ ರುದ್ರಪ್ಪನ ಪತ್ನಿ ಸಾವನ್ನಪ್ಪಿದ್ದರು. ಈರ್ವರು ಪುತ್ರಿಯರೊಂದಿಗೆ ಚೆನ್ನಯ್ಯನಕೋಟೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಶಿವರಾತ್ರಿಯ ಸಂದರ್ಭದಲ್ಲಿ ಊರಿಗೆ ತೆರಳಿದ್ದರು. ಇದೀಗ ತಂದೆ -ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳು ‘ನಮಗೆ ಇನ್ನು ಯಾರು ಗತಿ’ ಎಂದು ಶವಾಗಾರದ ಬಳಿ ಕಣ್ಣೀರು ಸುರಿಸುವ ದೃಶ್ಯ ಮನಕಲಕುವಂತಿತ್ತು. ಹೊಟ್ಟೆ ಪಾಡಿಗಾಗಿ ದೂರದ ಊರಿನಿಂದ ಕಾರ್ಮಿಕರಾಗಿ ಬಂದು ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿರುವದು ವಿಧಿಯಾಟವೆ ಸರಿ. ಮೃತಪಟ್ಟ ರುದ್ರಪ್ಪ ಅವರ ಮೃತದೇಹವನ್ನು ಸಿದ್ದಾಪುರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ರಾಘವೇಂದ್ರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರುದ್ರಪ್ಪನವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

(ಮೊದಲ ಪುಟದಿಂದ) ಮಧ್ಯರಾತ್ರಿಯೇ ಮೃತ ದೇಹವನ್ನು ಸಾಲಿಗ್ರಾಮಕ್ಕೆ ಕೊಂಡೊಯ್ದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಧನ ರೂ. 2 ಲಕ್ಷದ ಚೆಕ್ ಅನ್ನು ಸಾಲಿಗ್ರಾಮದಲ್ಲಿರುವ ಮೃತರ ಸ್ವಗೃಹಕ್ಕೆ ತೆರಳಿ ನೀಡಲಾಗುವದೆಂದು ಎ.ಸಿ.ಎಫ್. ಶ್ರೀಪತಿ ತಿಳಿಸಿದ್ದಾರೆ.

ಮತ್ತೆ ಕಾಡಾನೆಗಳ ಹಾವಳಿ

ಕಳೆದ ಕೆಲವು ದಿನಗಳಿಂದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ ಕಾಡಾನೆಗಳ ಹಿಂಡು ಅರಣ್ಯದತ್ತ ತೆರಳಿದ್ದವು. ಇದೀಗ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮರಳಿ ಕಾಫಿ ತೋಟಗಳಿಗೆ ಕಾಡಾನೆ ಗಳು ಲಗ್ಗೆ ಇಡುತ್ತಿದ್ದು, ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಘಟ್ಟದಳ ವ್ಯಾಪ್ತಿಯ ಕಾಫಿ ತೋಟಗಳಲ್ಲಿ 10 ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟು ದಾಂದಲೆ ನಡೆಸುತ್ತಿವೆÉ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡುಗಳನ್ನು ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದ ಆರ್.ಆರ್.ಟಿ. ತಂಡ ಅರಣ್ಯಕ್ಕೆ ಅಟ್ಟಲು ಪ್ರಯತ್ನಿಸುತ್ತಿದೆ. ಆದರೆ ಕಾಡಾನೆಗಳು ಮರಳಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಹಿನೆÀ್ನಲೆಯಲ್ಲಿ ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಮತ್ತೊಂದೆಡೆ ಹುಲಿ ಜಾನುವಾರಗಳ ಮೇಲೆ ಧಾಳಿ ನಡೆಸುತ್ತಿರುವದು ಆತಂಕ ಸೃಷ್ಟಿಸಿದೆ. ಜನವರಿ 22ರಂದು ಕರಡಿಗೋಡಿನ ಕಾಫಿ ಬೆಳೆಗಾರ ಕುಕ್ಕುನೂರು ಮೋಹನ್‍ದಾಸ್ ಅವರ ಮೇಲೆ ಕಾಡಾನೆ ಧಾಳಿ ನಡೆಸಿ ಸಾಯಿಸಿದ ಘಟನೆಯ ರೀತಿಯಲ್ಲೇ ರುದ್ರಪ್ಪನನ್ನು ಕೂಡ ಹತ್ಯೆ ಮಾಡಿದೆ. ಕೇವಲ ಒಂದೂವರೆ ತಿಂಗಳಿನ ಒಳಗೆ 2 ಮಂದಿ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟಿರುವ ಹಿನೆÀ್ನಲೆಯಲ್ಲಿ ಕಾಫಿ ತೋಟಗಳಲ್ಲಿ ಕೆಲಸಕ್ಕೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿ ದ್ದಾರೆ. ಸರ್ಕಾರ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಯೋಜನೆಯನ್ನು ರೂಪಿಸದಿದ್ದಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂಬದು ಗಾಮಸ್ಥರ ಅಭಿಪ್ರಾಯವಾಗಿದೆ.

-ಚಿತ್ರ ವರದಿ : ವಾಸು