ವೀರಾಜಪೇಟೆ, ಮಾ. 11: ವೀರಾಜಪೇಟೆಯಿಂದ ಹೆಗ್ಗಳ, ತೋರ, ಬೂದಿಮಳ ಮಾರ್ಗವಾಗಿ ಕೆದಮುಳ್ಳೂರಿನ ಮೂರ್ ರೋಡ್‍ಗಾಗಿ ಕರಡಕ್ಕೆ ಹೋಗುವ ರಸ್ತೆಗೆ ಡಾಂಬರೀಕರಣ ಮತ್ತು ಅಗಲಿಕರಣಕ್ಕೆ ರೂ. 65 ಲಕ್ಷ ಅನುದಾನದ ಕಾಮಗಾರಿಗೆ ತೋರ ಗ್ರಾಮದಲ್ಲಿ ಶಾಸಕ ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ನಂತರ ಹೆಗ್ಗಳ ಭಟ್ಟಮಕ್ಕಿಯ ಪ.ಜಾತಿ ಪಂಗಡಗಳ ಕಾಲೋನಿಗೆ ರೂ. 19.5 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಮಾತನಾಡಿ ಶಾಸಕರ ವಿಶೇಷ ಅನುದಾನದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ-ಬೂದಿಮಾಳ ಗೋಲ್ಡನ್ ರಾಕ್ಸ್ ಬಳಿ ರಸ್ತೆಗೆ ರೂ. 5 ಲಕ್ಷ. ಬೂದಿಮಾಳದಿಂದ ಬಾರಿಕಾಡ್ ಲಿಂಕ್ ರಸ್ತೆಗೆ ರೂ. 5 ಲಕ್ಷ, ಎಡಮಕ್ಕಿ ಅಯ್ಯಪ್ಪ ದೇವಾಲಯದಿಂದ ಭಟ್ಟಮಕ್ಕಿ ರಸ್ತೆ ಕಾಮಗಾರಿಗೆ ರೂ. 5 ಲಕ್ಷ, ಹೆಗ್ಗಳ ಆರ್ಜಿ ನಿರ್ಮಲಗಿರಿ ಲಿಂಕ್ ರಸ್ತೆ ರೂ. 5 ಲಕ್ಷ ವೆಚ್ಚದಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ತೋರ ಬೂದಿಮಾಳ ಭಾಗದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವದರಿಂದ ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲವೂ ಗುಂಡಿ ಹೊಂಡಗಳಾಗಿರುವದರಿಂದ ಈಗಾಗಲೇ ಕೆಲವು ರಸ್ತೆಗಳ ಕಾಮಗಾರಿ ಮುಗಿದಿದೆ. ಇನ್ನು ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯಬೇಕಾಗಿದ್ದು. ಅನುದಾನದ ಕೊರತೆಯಿಂದ ಅನೇಕ ರಸ್ತೆಗಳ ಕಾಮಗಾರಿ ಮಾಡಲು ಸಾಧ್ಯವಾಗಿಲ್ಲ. ಹಿಂದಿನ ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಹೆಚ್ಚು ಅನುದಾನ ಬರುತ್ತಿತ್ತು ಈಗ ಕಾಂಗ್ರೆಸ್ ಸರಕಾರದಲ್ಲಿ ಅನುದಾನದ ಕೊರತೆ ಇರುವದು ಅಗತ್ಯ ರಸ್ತೆಗಳ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ, ಅನುದಾನ ಬಂದ ತಕ್ಷಣ ಉಳಿದಿರುವ ರಸ್ತೆಗಳನ್ನು ಮುಂದೆ ಅಭಿವೃದ್ಧಿಗೊಳಿಸುವದಾಗಿ ಹೇಳಿದರು.
ಈ ಸಂದರ್ಭ ಬೇಟೋಳಿ ಗ್ರಾ.ಪಂ. ಸದಸ್ಯರಾದ ಲೀಲಾವತಿ, ಬೋಪಣ್ಣ, ಸರಸ್ವತಿ, ಮಾಜಿ ಸದಸ್ಯೆ ಪಾರ್ವತಿ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಚೋಟು ಬಿದ್ದಪ್ಪ, ಎ.ಎಂ. ಹರೀಶ್ ಹಾಗೂ ಗ್ರಾಮಸ್ಥರಾದ ಪಿ.ಎಂ. ವಿಜಯ, ಎಂ.ಡಿ. ಧನೇಶ್, ಅರುಣ್ ಪೂಜಾರಿ, ಜತ್ತಪ್ಪ, ಜಯನಂದ, ಸುಗುಣ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.