ಸೋಮವಾರಪೇಟೆ, ಮಾ. 11: ತಾಲೂಕಿನ ಕೊಡ್ಲಿಪೇಟೆ ಸಮೀಪದ ಹ್ಯಾಂಡ್‍ಪೋಸ್ಟ್ ಬಳಿಯಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಪ್ರಭಾವಿ ವ್ಯಕ್ತಿಯೋರ್ವ ಲಾಂಗ್ ಹಿಡಿದು ಹಲ್ಲೆ ನಡೆಸಲು ಯತ್ನಿಸಿರುವ ವೀಡಿಯೋ ಒಂದು ಇದೀಗ ‘ಪುಡಿ ರೌಡಿಯ ರೌಡಿಸಂ’ ಎಂಬ ಕಮೆಂಟ್ಸ್‍ನೊಂದಿಗೆ ವಾಟ್ಸಪ್‍ನಲ್ಲಿ ಹರಿದಾಡುತ್ತಿದೆ.

ಕೊಡ್ಲಿಪೇಟೆ ಭಾಗದಲ್ಲಿ ರಿಯಲ್ ಎಸ್ಟೇಟ್, ಮರಳು ಗಣಿಗಾರಿಕೆ ಸೇರಿದಂತೆ ಇತರ ವಹಿವಾಟು ನಡೆಸುತ್ತಿರುವ ವ್ಯಕ್ತಿಯೋರ್ವ ರಾತ್ರಿ ವೇಳೆ ಪೆಟ್ರೋಲ್ ಬಂಕ್‍ಗೆ ಬಂದು ತನ್ನ ಕಾರಿನಿಂದ ಲಾಂಗ್ ತೆಗೆದು ಸುತ್ತಮುತ್ತಲಿನವರಿಗೆ ಅವಾಜ್ ಹಾಕಿದ ನಂತರ, ಮೊಬೈಲ್‍ನಲ್ಲಿ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಳಿ ವೇಗವಾಗಿ ಧಾವಿಸಿ ಲಾಂಗ್ ಬೀಸಿರುವ ವೀಡಿಯೋ ಇದೀಗ ಕೊಡ್ಲಿಪೇಟೆ ಭಾಗದ ಹಲವರ ಮೊಬೈಲ್‍ನಲ್ಲಿ ಹರಿದಾಡುತ್ತಿದೆ.

ಇದರೊಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮೊಬೈಲ್‍ನಲ್ಲಿ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ, ಪೆಟ್ರೋಲ್ ಬಂಕ್‍ನಲ್ಲಿ ಆಕಸ್ಮಿಕ ಬೆಂಕಿ ಅವಘಡವಾದಾಗ ಆರಿಸಲೆಂದು ಇಡಲಾಗುವ ಮರಳನ್ನು ತೆಗೆದು ಎರಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್ ಬೀಸಿದ್ದಾನೆ.

“ಈ ಹಿಂದೆ ಇದ್ದ ಅಧಿಕಾರಿಯೊಬ್ಬರ ಶಿಷ್ಯ, ಕೊಡ್ಲಿಪೇಟೆಯ ಈ ಪುಡಿ ರೌಡಿಯ ಆರ್ಭಟ ನೋಡಿ. ಅವರ ಕುಮ್ಮಕ್ಕಿನಿಂದ ಈತ ಈ ರೀತಿ ಬೆಳೆದ. ಕಾಲಾಯ ತಸ್ಮೈ ನಮಃ” ಎಂಬ ಹೆಡ್ಡಿಂಗ್‍ನೊಂದಿಗೆ ಹಲವರು ಈ ವೀಡಿಯೋವನ್ನು ವಾಟ್ಸಪ್‍ನಲ್ಲಿ ಹರಿಯಬಿಡುತ್ತಿದ್ದಾರೆ. ಇಷ್ಟೇ ಅಲ್ಲದೇ ಇದೇ ವ್ಯಕ್ತಿಯ ಇನ್ನೂ ಹಲವು ದೌರ್ಜಜ್ಯ, ಬೆದರಿಕೆಯ ವೀಡಿಯೋಗಳಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸಾರ್ವಜನಿಕರ ಮುಂದೆ ಇಡಲಾಗುವದು ಎಂಬ ಸಂದೇಶಗಳೂ ಹರಿದಾಡುತ್ತಿವೆ.

ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಅಕ್ರಮ ಮರಳು ಸಾಗಾಟ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಆಗಾಗ್ಗೆ ಕಾದಾಟಗಳು ನಡೆಯುತ್ತಿದ್ದು, ಈಗಾಗಲೇ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿವೆ.

ಇದೀಗ ಮತ್ತೊಮ್ಮೆ ಕಾದಾಟಕ್ಕೆ ರಣಾಂಗಣ ಸಿದ್ದವಾಗುತ್ತಿರುವಂತೆ ಕಂಡುಬರುತ್ತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಹದ್ದಿನ ಕಣ್ಣಿಡಬೇಕಿದೆ. ಸ್ವಯಂಪ್ರೇರಿತವಾಗಿ ತನಿಖೆ ನಡೆಸುವ ಮೂಲಕ ವೀಡಿಯೋ ಇನ್ನಷ್ಟು ಹರಡಿ ಮುಂದೊಮ್ಮೆ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕಿದೆ. ಕೊಡ್ಲಿಪೇಟೆ ಭಾಗದಲ್ಲೂ ಪೊಲೀಸರು ಇದ್ದಾರೆ ಎಂಬದನ್ನು ತಕ್ಷಣಕ್ಕೆ ನಿರೂಪಿಸಬೇಕಿದೆ.