ಮಡಿಕೇರಿ, ಮಾ. 11: ಕರ್ನಾಟಕ ಸರಕಾರದ ನಿವೃತ್ತ ಅಧಿಕಾರಿಯೊಬ್ಬರು ಉಚ್ಚ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡುವದರೊಂದಿಗೆ, ಇಲ್ಲಿನ ಐತಿಹಾಸಿಕ ರಾಜರ ಅರಮನೆ ಸಹಿತ ಕೋಟೆ ಆವರಣದ ಅರ್ಜಿ ವಿಚಾರಣೆ ಮುಂದುವರಿದಿದ್ದು, ಯುಗಾದಿಯ ಬಳಿಕ ಮರು ವಿಚಾರಣೆ ನಡೆಯಲಿದೆ ಎಂದು ಗೊತ್ತಾಗಿದೆ.ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ನಿರ್ವಹಣೆಗೆ ಇನ್ನೂ ಕೂಡ ಈ ರಾಜ ಪರಂಪರೆಯ ಐತಿಹಾಸಿಕ ಕೋಟೆಯನ್ನು ವಹಿಸದಿರುವ ಬಗ್ಗೆ ಈಗಾಗಲೇ ಉಚ್ಚ ನ್ಯಾಯಾಲಯವು ಸಂಬಂಧಪಟ್ಟವ ರಿಂದ ವಿವರಣೆ ಕೇಳಿ ನೋಟೀಸ್ ಜಾರಿಗೊಳಿಸಿರುವದಾಗಿ ಮಾಹಿತಿ ಲಭಿಸಿದೆ.ಆಲೂರು ಸಿದ್ದಾಪುರ ನಿವಾಸಿ ಹಾಗೂ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಅವರು, ಮಡಿಕೇರಿ ಕೋಟೆಯ ದುರವಸ್ಥೆ ಸಂಬಂಧ ನ್ಯಾಯಾಲಯದ ಮೊರೆಹೋಗುವದ ರೊಂದಿಗೆ, ಈ ಆವರಣದಲ್ಲಿ ಇರುವ ಎಲ್ಲಾ ಸರಕಾರಿ ಕಚೇರಿಗಳನ್ನು ತೆರವುಗೊಳಿಸುವ ಮುಖಾಂತರ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಗೆ ಬಿಟ್ಟುಕೊಡಬೇಕೆಂದು ಈಗಾಗಲೇ ಕೋರಿದ್ದಾರೆ.
ಅಲ್ಲದೆ, ಅರ್ಜಿದಾರರು ಕರ್ನಾಟಕ ರಾಜ್ಯ ಸರಕಾರವು ಮಡಿಕೇರಿ ಕೋಟೆ ಆವರಣದೊಳಗೆ ತನ್ನ ಅಧೀನ ವಿರುವ ಬೇರೆ ಬೇರೆ ಇಲಾಖೆಗಳ ಆಡಳಿತ ನಿರ್ವಹಣೆ ನಡೆಸುತ್ತಿದ್ದರೂ, ಶಿಥಿಲಗೊಂಡಿರುವ ಕಟ್ಟಡದ ಅಭಿವೃದ್ಧಿಗೆ ಯಾವ ರೀತಿಯಲ್ಲೂ ಗಮನ ಹರಿಸುತ್ತಿಲ್ಲವೆಂದು ಛಾಯಾಚಿತ್ರಗಳ ಸಹಿತ ಸಚಿತ್ರ ದೂರು ಸಲ್ಲಿಸಿದ್ದಾರೆ.
ಕೊಡಗಿನ ರಾಜಪರಂಪರೆಯ ಆಳ್ವಿಕೆಯ ಗತವೈಭವದ ಅರಮನೆಯ ಮೇಲ್ಚಾವಣಿ ಹೆಂಚುಗಳು ದಿನೇ ದಿನೇ ಕುಸಿಯುವದರೊಂದಿಗೆ, ಮಾಡುಗಳಲ್ಲಿ ಮಳೆಯಿಂದ ಸೋರುವಿಕೆಯ ಪರಿಣಾಮ ಅರಮನೆಯ ಮರಮುಟ್ಟು ಹಾಳಾಗಿ ಯಾವದೇ ಸಂದರ್ಭ ಬೀಳುವ ಸ್ಥಿತಿಯಲ್ಲಿ ಇರುವದಾಗಿ ನ್ಯಾಯಾಲಯದ ಗಮನ ಸೆಳೆದಿದ್ದಾರೆ. ಅರ್ಜಿದಾರರ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರು, ಉಚ್ಚ ನ್ಯಾಯಾಲಯದ ಮಖ್ಯ ನ್ಯಾಯಮೂರ್ತಿಗಳ ಗಮನ ಸೆಳೆಯುವದರೊಂದಿಗೆ, ಪ್ರಸಕ್ತ ನಿರ್ವಹಣೆಯಿಲ್ಲದೆ ದುರ್ಬಲ ಗೊಂಡಿರುವ ಕೋಟೆಯನ್ನು ಸಂರಕ್ಷಿಸಿ ಪುನರ್ ನವೀಕರಣಗೊಳಿಸದಿದ್ದರೆ, ಯಾವದೇ
(ಮೊದಲ ಪುಟದಿಂದ) ಸಂದರ್ಭ ಕುಸಿದು ಬೀಳುವ ಅಪಾಯವಿರುವದಾಗಿ ಮನದಟ್ಟು ಮಾಡಿದ್ದಾರೆ.
ಅಲ್ಲದೆ, ಕೊಡಗಿನ ರಾಜಪರಂಪರೆಯ ಅಪರೂಪದ ಈ ಕೋಟೆ ರಕ್ಷಿಸಲು ಕರ್ನಾಟಕ ಸರಕಾರದಿಂದ ಮುಕ್ತಗೊಳಿಸಿ ಆದಷ್ಟು ಶೀಘ್ರಗತಿಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯದ ಸುಪರ್ದಿಗೆ ಒಪ್ಪಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಈ ಎಲ್ಲಾ ಅಂಶವನ್ನು ಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರದಿಂದ ವಿವರಣೆ ಕೋರಿ ನೋಟೀಸ್ ಜಾರಿಗೊಳಿಸಿರುವದಾಗಿ ಅರ್ಜಿದಾರರ ಪರ ವಕೀಲರು ‘ಶಕ್ತಿ’ಗೆ ವಿವರ ನೀಡಿದ್ದಾರೆ.
ಈಗಾಗಲೇ ಮೇಲ್ಚಾವಣಿ ಸೀಟ್ ಇತ್ಯಾದಿ ಹಾಕಿ ಕೋಟೆಯ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡಿದ್ದಲ್ಲದೆ, ಅಲ್ಲಲ್ಲಿ ಕಟ್ಟಡದ ಗೋಡೆಗಳಲ್ಲಿ ಗಿಡಗಂಟಿ ಬೆಳೆದು ಅಪಾಯದ ಲಕ್ಷಣ ಗೋಚರಿಸುತ್ತಿರುವ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿರುವದಾಗಿ ಅವರು ಮಾಹಿತಿ ಒದಗಿಸಿದ್ದಾರೆ. ಸರಕಾರ ಮತ್ತು ಪ್ರಾಚ್ಯವಸ್ತು ಇಲಾಖೆಯ ಉತ್ತರ ಗಮನಿಸಿ ಮುಂದಿನ ಕ್ರಮವನ್ನು ನ್ಯಾಯಾಲಯ ಅನುಸರಿಸಲಿದೆ ಎಂದು ತಿಳಿಸಿದ್ದಾರೆ.