ಮಡಿಕೇರಿ, ಮಾ. 11: ಜಿಲ್ಲೆಯಲ್ಲಿ ಪೋಲಿಯೋ ಮುಕ್ತ ಸಮಾಜಕ್ಕಾಗಿ ಎರಡನೇ ಹಂತದ ಅಭಿಯಾನದಲ್ಲಿ ಇಂದು ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಶೇ. 93.76 ಯಶಸ್ವಿಯಾಗಿದೆ. 40,627 ಶಿಶುಗಳ ಪೈಕಿ 38,093 ಮಕ್ಕಳಿಗೆ ಲಸಿಕೆ ಹಾಕುವದರೊಂದಿಗೆ ಈ ಸಾಧನೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಮಡಿಕೇರಿ ತಾಲೂಕಿನಲ್ಲಿ ಶೇ. 91.36 ರಷ್ಟು ಸಾಧನೆಯಾಗಿದ್ದು, ವೀರಾಜಪೇಟೆ ತಾಲೂಕಿನಲ್ಲಿ ಶೇ. 93.37 ರಷ್ಟು ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ ಅಧಿಕವಾಗಿದ್ದು, ಶೇ. 96.21 ರಷ್ಟು ಗುರಿ ಮುಟ್ಟಿದೆ ಎಂದು ಅಂಕಿಅಂಶ ನೀಡಿದೆ.

ಜಿಲ್ಲೆಯಾದ್ಯಂತ ಇಂದು ಬೆಳಿಗ್ಗೆಯಿಂದ ಸಂಜೆ 5 ಗಂಟೆಯ ತನಕ ನಿರ್ಧಿಷ್ಟ ಕೇಂದ್ರಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ಐದು ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಆರೋಗ್ಯ ಇಲಾಖೆಯ ಸಿಬ್ಬಂದಿ ಲಸಿಕೆ ಹಾಕುವಲ್ಲಿ ಶ್ರಮಿಸಿದ್ದಾರೆ.

ಸೋಮವಾರಪೇಟೆ: ಆರೋಗ್ಯ ಇಲಾಖೆ ಮೂಲಕ ಆಯೋಜಿಸ ಲಾಗಿದ್ದ 2ನೇ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ತಾಲೂಕಿನಾದ್ಯಂತ ನಡೆದಿದ್ದು, ಶೇ. 96.21 ಸಾಧನೆಯಾಗಿದೆ.

13,657 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದರಲ್ಲಿ 13,139 ಮಕ್ಕಳಿಗೆ ಎರಡನೇ ಹಂತದ ಲಸಿಕೆ ಹಾಕಲಾಯಿತು. ತಾಲೂಕು ಆರೋಗ್ಯ ಇಲಾಖಾ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರೊಂದಿಗೆ ಸ್ವಯಂಸೇವಕರು ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರೊಂದಿಗೆ ರೋಟರಿ ಸಂಸ್ಥೆ ಮತ್ತು ಗ್ರಾಮ ಪಂಚಾಯತ್‍ಗಳಿಂದಲೂ ಸಹಯೋಗ ನೀಡಲಾಗಿತ್ತು.

ಕಳೆದ ಬಾರಿ 14,017 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಗುರಿ ಮೀರಿದ ಸಾಧನೆಯಾಗಿತ್ತು. ಪ್ರವಾಸಿಗರ ಮಕ್ಕಳು ಹೆಚ್ಚು ಆಗಮಿಸಿದ್ದರಿಂದ ಕಳೆದ ವರ್ಷ ಶೇ.102ರಷ್ಟು ಸಾಧನೆಯಾಗಿತ್ತು. ಈ ಬಾರಿ ಶೇ. 96.21 ಸಾಧನೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾಹಿತಿ ನೀಡಿದರು.

ಸೋಮವಾರಪೇಟೆಯ ಒಟ್ಟು 147 ಬೂತ್‍ಗಳಲ್ಲಿ ಪೋಲಿಯೋ ಲಸಿಕೆ ಹಾಕಲಾಯಿತು. ಬಸ್ ನಿಲ್ದಾಣ, 13 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಸಮುದಾಯ ಆರೋಗ್ಯ ಕೇಂದ್ರ, 1 ತಾಲೂಕು ಆಸ್ಪತ್ರೆ, 2 ಸಂಚಾರಿ ಘಟಕಗಳ ಮೂಲಕ ಮಕ್ಕಳಿಗೆ ಲಸಿಕೆ ನೀಡಲಾಯಿತು.

2 ಮೊಬೈಲ್ ಘಟಕಗಳೂ ಸೇರಿದಂತೆ ಸೋಮವಾರಪೇಟೆಯ ಸರ್ಕಾರಿ ಬಸ್ ನಿಲ್ದಾಣ, ಶನಿವಾರ ಸಂತೆ, ಕೊಡ್ಲಿಪೇಟೆಯ ಖಾಸಗಿ ಬಸ್ ನಿಲ್ದಾಣ, ಕುಶಾಲನಗರದ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಕಾವೇರಿ ನಿಸರ್ಗಧಾಮದಲ್ಲಿ ತಾ. 14ರವರೆಗೂ ಲಸಿಕೆ ಹಾಕುವ ಕಾರ್ಯಕ್ರಮವಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ಒದಗಿಸಿದರು.

ಶನಿವಾರಸಂತೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಗುಂಡೂರಾವ್ ಬಡಾವಣೆ, ತ್ಯಾಗರಾಜ ಕಾಲೋನಿ, ಶನಿವಾರಸಂತೆ ಹೋಬಳಿಯ ದುಂಡಳ್ಳಿ, ಮಾದ್ರೆ, ಮೂದ್ರವಳ್ಳಿ, ಹಂಡ್ಲಿ ಹಾಗೂ ಕಿತ್ತೂರು ಗ್ರಾಮಗಳ 9 ಬೂತ್‍ಗಳಲ್ಲಿ ಭಾನುವಾರ ನಡೆದ 2ನೇ ಹಂತದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಯಾಯಿತು. 5 ವರ್ಷದೊಳಗಿನ ಒಟ್ಟು 900 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು.

ಪಟ್ಟಣ ವ್ಯಾಪ್ತಿಯ 4 ಬೂತ್‍ಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್, ಪಲ್ಸ್ ಪೋಲಿಯೋ ಮೇಲ್ವಿಚಾರಕರಾದ ವಿನಯಕುಮಾರ್, ನಾಗರಾಜ್, ಹಿರಿಯ ಆರೋಗ್ಯ ಸಹಾಯಕಿ ಸರಸ್ವತಿ, ಸಿಸ್ಟರ್ ವಸಂತಿ, ಆರೋಗ್ಯ ಸಹಾಯಕ ಕುಮಾರ್, ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿದೇವಿ, ಭಾಗ್ಯ, ಅಂಗನವಾಡಿ ಶಿಕ್ಷಕಿ ಧನಲಕ್ಷ್ಮಿ ಮತ್ತಿತರರು ಕರ್ತವ್ಯ ನಿರ್ವಹಿಸಿದರು. ನೋಡಲ್ ಅಧಿಕಾರಿಯಾಗಿ ಮಡಿಕೇರಿಯ ಡಾ. ನೀಲೇಶ್ ಭೇಟಿ ನೀಡಿ ಪರಿಶೀಲಿಸಿದರು.

ಸುಂಟಿಕೊಪ್ಪ: ಪಲ್ಸ್‍ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಬಸ್ ನಿಲ್ದಾಣದಲ್ಲಿ ಗ್ರಾ.ಪಂ. ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಪಲ್ಸ್ ಪೋಲಿಯೋ ಲಸಿಕೆಯನ್ನು ನೀಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಆರೋಗ್ಯ ಸಹಾಯಕಿ ಪ್ರಭಾ, ಅಂಗನವಾಡಿ ಕಾರ್ಯಕರ್ತೆ ಶೋಭಾ, ಆಶಾ ಕಾರ್ಯಕರ್ತೆಯರು ಇದ್ದರು.

ವೀರಾಜಪೇಟೆ: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಎರಡನೇ ಹಂತದ ಪಲ್ಸ್ ಪೋಲಿಯೋ ನಡೆದಿದ್ದು, ತಾಲೂಕಿನಲ್ಲಿ ಒಟ್ಟು ಶೇಕಡ 93ರಷ್ಟು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ. ಈ ಪೈಕಿ ವೀರಾಜಪೇಟೆ ಪಟ್ಟಣದ 11 ಲಸಿಕಾ ಕೇಂದ್ರದಲ್ಲಿ ಶೇಕಡ 75ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

ಇಂದು ಬೆಳಿಗ್ಗೆ ಪಕ್ಷಿತಜ್ಞ ಹಾಗೂ ವೈದ್ಯರಾದ ಡಾ. ನರಸಿಂಹನ್ ಅವರು ಮಗುವಿಗೆ ಲಸಿಕೆ ಹಾಕಿ ಪೋಲಿಯೋ ಶಿಬಿರಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಶಾಂತರಾಂ ಕಾಮತ್, ಆಸ್ಪತ್ರೆಯ ದಾದಿಯರು, ಸಿಬ್ಬಂದಿ ಹಾಜರಿದ್ದರು.

ಆಲೂರುಸಿದ್ದಾಪುರ: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ, ತ್ಯಾಗರಾಜ ಕಾಲೋನಿ ಅಂಗನವಾಡಿ ಕೇಂದ್ರ ಸೇರಿದಂತೆ ಪಟ್ಟಣ ಮತ್ತು ಪಕ್ಕದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಯಿತು. ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಮಾಲಂಬಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೊ ಲಸಿಕೆ ಹಾಕಲಾಯಿತು.