ಸುಂಟಿಕೊಪ್ಪ, ಮಾ. 11: ಕಾಮನ್‍ವೆಲ್ತ್ ಗೇಮ್ಸ್‍ನ ಬಾಸ್ಕೆಟ್ ಬಾಲ್‍ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಕೊಡಗಿನ ಕುವರಿ ಸುಂಟಿಕೊಪ್ಪದ ಗದ್ದೆಹಳ್ಳದ ಪಟ್ಟೆಮನೆ ನವನೀತ ಸ್ಪರ್ಧಿಸಲು ಆಸ್ಟ್ರೇಲಿಯಾಕ್ಕೆ ತಾ.12 ರಂದು ಪ್ರಯಾಣ ಬೆಳೆಸಲಿದ್ದಾರೆ.

ಏಪ್ರಿಲ್ 4ರಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಕ್ರೀಡಾಕೂಟದ ಬಾಸ್ಕೆಟ್‍ಬಾಲ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ನವನೀತ ಹಾಗೂ ಮೂಲತಃ ಮಂಡ್ಯ ಜಿಲ್ಲೆಯ ನಿವಾಸಿ, ಮೂಡÀಬಿದಿರಿಯ ಅಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಎಚ್.ಎಂ.ಬಾಂಧವ್ಯ ಅವರು ಪ್ರತಿನಿಧಿಸಲಿ ದ್ದಾರೆ.

2016-2017 ನೇ ಸಾಲಿನಲ್ಲಿ ಪಾಂಡಿಚೇರಿಯಲ್ಲಿ ನಡೆದ ಸೀನಿಯರ್ ನ್ಯಾಷನಲ್ಲಿ ನವನೀತ ಕಂಚಿನ ಪದಕ ಪಡೆದಿದ್ದರಲ್ಲದೇ 2012-13ನೇ ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಪ್ರಶಸ್ತಿ 2014-15ನೇ ಸಾಲಿನಲ್ಲಿ ಅನಂತಪುರದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮಸ್ಥಾನ ಹಾಗೂ ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿ ಗಳಿಸಿದ್ದರು. ಕಳೆದ ವರ್ಷ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಮಹಿಳಾ ಬಾಸ್ಕೆಟ್‍ಬಾಲ್ ಚಾಂಪಿಯನ್ ಏಷಿಯನ್ ‘ಬಿ’ ಡಿವಿಷನ್ ಲೀಗ್‍ನಲ್ಲಿ ಸ್ಪರ್ಧಿಸಿದ್ದರು ಈಕೆ ಮೈಸೂರಿನ ದಕ್ಷಿಣ ರೈಲ್ವೆಸ್‍ನಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟೆಮನೆ ಉದಯಕುಮಾರ್ ಗಿರಿಜಾ ದಂಪತಿಯ ಪುತ್ರಿಯಾಗಿದ್ದಾಳೆ. ನವನೀತಾಳ ಅವಳ ಕಠಿಣ ಪರಿಶ್ರಮದ ಫಲವಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ ಎಂದು ಪಟ್ಟೆಮನೆ ಉದಯಕುಮಾರ್ ಗಿರಿಜಾ ದಂಪತಿಗಳು ಹರ್ಷ ವ್ಯಕ್ತಪಡಿಸಿದ್ಧಾರೆ.