ಸೋಮವಾರಪೇಟೆ, ಮಾ. 11: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಗಳು ತಾ. 12 ರಂದು (ಇಂದು) ಮತ್ತು 13ರಂದು ನಡೆಯಲಿದೆ.
ಜಾತ್ರೋತ್ಸವದ ಪ್ರಯುಕ್ತ ಭಾನುವಾರದಂದು ದೇವಾಲಯದಲ್ಲಿರುವ ನಾಗ ದೈವಗಳಿಗೆ ವಿಶೇಷ ಪೂಜೆ ನಡೆದು ನಂತರ ಬಲಿಪೂಜೆ ನೆರವೇರಿತು.
ತಾ. 12ರ ಬೆಳಗ್ಗೆ 4.30 ಗಂಟೆಗೆ ಗಣಪತಿ ಹೋಮ, 6ಕ್ಕೆ ಶುದ್ದೀಪುಣ್ಯ, 6.30ಕ್ಕೆ ಜಾತ್ರೋತ್ಸವದ ಧ್ವಜಾರೋಹಣ ನೆರವೇರಲಿದೆ. 10 ಗಂಟೆಯಿಂದ 11 ಗಂಟೆವರೆಗಿನ ವೃಷಭ ಲಗ್ನದಲ್ಲಿ ನಾಗರಾಜ, ನಾಗಕನ್ಯೆ ದೇವರ ಪುನರ್ ಪ್ರತಿಷ್ಠಾಪನೆ ಕಾರ್ಯ ಕೇರಳದ ಕೊಳಪುರತ್ ಮನಹಿಲ್ಲಂ ಮನೆತನದ ತಂತ್ರಿಗಳಾದ ಶ್ರೀ ಕೃಷ್ಣಕುಮಾರ್‍ರವರ ಪೌರೋಹಿತ್ಯದಲ್ಲಿ ನೆರವೇರಲಿದೆ.
ನೂತನವಾಗಿ ನಿರ್ಮಾಣ ಗೊಂಡ ಶ್ರೀ ಭುವನೇಶ್ವರಿ ದೇವಿಯ ಮುಖ ಮಂಟದ ಉದ್ಘಾಟನೆಯನ್ನು 11.30ಕ್ಕೆ ಶಾಸಕ ಅಪ್ಪಚ್ಚು ರಂಜನ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಡಿ. ವಿನೋದ್‍ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಕಳಶ ಪೂಜೆ, ಶ್ರೀ ಮುತ್ತಪ್ಪ-ತಿರುವಪ್ಪ ದೈವಗಳ ವೆಳ್ಳಾಟಂನೊಂದಿಗೆ ಉತ್ಸವಗಳು ಆರಂಭವಾಗಲಿದೆ. ಸಂಜೆ 4.30ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಪಟ್ಟಣದಲ್ಲಿ ಕಳಸದ ಮೆರವಣಿಗೆ ನಡೆಯಲಿದೆ. ಸಂಜೆ 6.30ರಿಂದ ವಿಷ್ಣುಮೂರ್ತಿ, ಕರಿಂಗುಟ್ಟಿ ಶಾಸ್ತಾವು, ಕಂಡಕರ್ಣ, ಭಗವತಿ, ರಕ್ತಚಾಮುಂಡಿ, ಪೊಟ್ಟನ್ ದೈವಗಳ ವೆಳ್ಳಾಟಂ ರಾತ್ರಿ 11.30 ರವರೆಗೆ ನಡೆಯಲಿದೆ. ನಂತರ ದೇವರ ಕಳಿಕ್ಕಾಪಾಟ್ ನೆರವೇರಲಿದೆ.
ತಾ. 13ರ ಬೆಳಗ್ಗಿನ ಜಾವ 1 ಗಂಟೆಯಿಂದ ಭಗವತಿ, ಕಂಡಕರ್ಣ, ಪೊಟ್ಟನ್, ಕರಿಂಗುಟ್ಟಿ ಶಾಸ್ತಾವು, ಮುತ್ತಪ್ಪ-ತಿರುವಪ್ಪ, ರಕ್ತಚಾಮುಂಡಿ, ವಿಷ್ಣುಮೂರ್ತಿ, ಗುಳಿಗ ದೈವಗಳ ಕೋಲಗಳು ನಡೆಯಲಿದೆ. ಬೆಳಗ್ಗಿನ ಜಾವ 4.30 ಗಂಟೆಗೆ ಪೊಟ್ಟನ್ ದೈವ ಅಗ್ನಿಗೇರುವದು, ಬೆಳಿಗ್ಗೆ 10 ಗಂಟೆಗೆ ಕಂಡಕರ್ಣ ದೈವದ ಗುರುಶ್ರೀದರ್ಪಣ, ಮಧ್ಯಾಹ್ನ 1.30ಕ್ಕೆ ಗುಳಿಗ ದೇವರಿಗೆ ವಿಶೇಷ ಪೂಜೆ ನಡೆದು, ಅಪರಾಹ್ನ 3 ಗಂಟೆಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.
ಪುನರ್ ಪ್ರತಿಷ್ಠಾಪನೆ ಮತ್ತು ಜಾತ್ರೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ಅನ್ನದಾನ ಏರ್ಪಡಿಸ ಲಾಗಿದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ತಿಳಿಸಿದ್ದಾರೆ.