ಮಡಿಕೇರಿ, ಮಾ. 11: ಕಾಂಗ್ರೆಸ್ ಪಕ್ಷದ ಆರೋಗ್ಯ ಘಟಕದಿಂದ ಗ್ರಾಮೀಣ ಪ್ರದೇಶಗಳ ಮಹಿಳೆಯರು, ವೃದ್ಧರು ಸೇರಿದಂತೆ ಸರ್ವರಿಗೆ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜಿಸುವಂತೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕರೆ ನೀಡಿದರು. ಇಲ್ಲಿನ ರೋಟರಿ ಸಭಾಂಗಣದಲ್ಲಿ ಕಾಂಗ್ರೆಸ್ ಆರೋಗ್ಯ ಘಟಕದಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕೊಡಗು ಗ್ರಾಮೀಣ ಪ್ರದೇಶದೊಂದಿಗೆ ಹಳ್ಳಿಗಳಿಂದ ಕೂಡಿದ್ದು, ಅಲ್ಲಿನ ಜನತೆ ಬಹಳಷ್ಟು ಸಂದರ್ಭ ದೈನಂದಿನ ದುಡಿಮೆ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವದಿಲ್ಲವೆಂದು ನುಡಿದ ವೀಣಾ ಅಚ್ಚಯ್ಯ, ಇಂತಹ ಜನರಿಗೆ ಗ್ರಾಮಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿದರೆ, ಆರೋಗ್ಯವಂತ ಸಮಾಜ ರೂಪಿಸುವದು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಆತಂಕ : ಮಂಗಳೂರು ಇಂಡಿಯಾನ ಆಸ್ಪತ್ರೆಯ ತಜ್ಷ ಡಾ. ಯೂಸೂಫ್ ಕುಂಬ್ಳೆ ಈ ಉಚಿತ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಕೊಡಗಿನಂತಹ ಪ್ರತಿಷ್ಠಿತ ಜಿಲ್ಲೆಯಲ್ಲಿ ಯಾವೊಂದು ವಿಶೇಷ ಸೌಲಭ್ಯಗಳಿಂದ ಕೂಡಿರುವ ಆಸ್ಪತ್ರೆ ಇಲ್ಲದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಹೃದಯ, ಮೆದುಳು, ಮೂತ್ರಕೋಶ, ಪಿತ್ತಕೋಶ, ಮೂಳೆ ಇತ್ಯಾದಿ ಸಣ್ಣ ಸಮಸ್ಯೆಗಳಿಗೂ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಗಳನ್ನು ಕೊಡಗಿನ ಜನತೆ ಅವಲಂಬಿಸಬೇಕಾಗಿದೆ ಎಂದು ಅವರು ಬೊಟ್ಟು ಮಾಡಿದರು.
ಈ ದಿಸೆಯಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವ ಸಂದರ್ಭ ಇಂಡಿಯಾನ ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರನ್ನು ಇಲ್ಲಿನ ರೋಗಿಗಳ ಸೇವೆಗಾಗಿ ಇಂದು ಕರೆಸಿದ್ದು, ಪ್ರಚಾರದ ಕೊರತೆಯಿಂದ ಬಹುಶಃ ಹೆಚ್ಚು ಮಂದಿ ಬಂದಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಉಚ್ಚ ನ್ಯಾಯಾಲಯದ ವಕೀಲ ಹಾಗೂ ಶಿಬಿರ ಸಂಯೋಜಕ ಹೆಚ್.ಎಸ್. ಚಂದ್ರಮೌಳಿ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಕಾಂಗ್ರೆಸ್ ವೈದ್ಯ ಪ್ರಕೋಷ್ಠ ಅಧ್ಯಕ್ಷ ಡಾ. ಉದಯಕುಮಾರ್ ಮೊದಲಾದವರು ಜನತೆಯ ಆರೋಗ್ಯ ಸಂಬಂಧ ಅಭಿಪ್ರಾಯ ನೀಡಿದರು.
ಮಡಿಕೇರಿ ಘಟಕ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ಅವರಿಗೆ ಔಷಧಿ ವಿತರಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ನಗರಸಭೆ ಮಾಜಿ ಉಪಾಧ್ಯಕ್ಷೆ ಕಾವೇರಮ್ಮ ಪೂವಣ್ಣ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಯಾಕೂಬ್, ಹಿರಿಯರಾದ ಅಂಬೆಕಲ್ ಕುಶಾಲಪ್ಪ ಮೊದಲಾದವರು ಪಾಲ್ಗೊಂಡಿದ್ದ ಶಿಬಿರದಲ್ಲಿ ವಿವಿಧ ರೋಗಗಳಿಗೆ ನುರಿತ ತಜ್ಞ ವೈದ್ಯರು ತಪಾಸಣೆಯೊಂದಿಗೆ ಶಿಬಿರಾರ್ಥಿಗಳಿಗೆ ಔಷಾದೋಪಚಾರ ನೀಡಿದರು. ತೆನ್ನೀರ ಮೈನಾ ಕಾರ್ಯಕ್ರಮ ನಿರೂಪಿಸಿದರು.