ಮಡಿಕೇರಿ, ಮಾ. 11: ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಈಗಾಗಲೇ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ, ಗುಜರಾತ್ ಮತ್ತು ತಂಜಾವೂರಿನಿಂದ ತರಿಸಲಾಗಿರುವ ಮತಯಂತ್ರಗಳ ತಪಾಸಣೆಯು ಇಲ್ಲಿನ ಪೊಲೀಸ್ ಮೈತ್ರಿ ಭವನದಲ್ಲಿ ಬಿಗಿಭದ್ರತೆ ನಡುವೆ ಸತತ ಹತ್ತು ದಿನಗಳ ತನಕ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾ ದಂಡಾಧಿಕಾರಿ ಪಿ.ಐ. ಶ್ರೀವಿದ್ಯಾ ನೇತೃತ್ವದ ಚುನಾವಣಾ ತಂಡವು ಬೆಂಗಳೂರಿನಿಂದ ಆಗಮಿಸಿದ್ದ ನುರಿತ ತಂತ್ರಜ್ಞರ ಸಮ್ಮುಖ ಮತಯಂತ್ರಗಳ ತಪಾಸಣೆ ಪೂರ್ಣಗೊಳಿಸಿದ್ದಾರೆ.ಈ ಮತಯಂತ್ರಗಳ ತಪಾಸಣೆಗೆ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ (ಬಿಇಎಲ್) ಮತಯಂತ್ರ ಇವಿಯಂ ತಜ್ಞ ಅಶೋಕ್‍ಲಾಲ್ ನೇತೃತ್ವದಲ್ಲಿ, ಸಹಾಯಕ ತಂತ್ರಜ್ಞ ಮಣಿ ಸೇರಿದಂತೆ ಸುಮಾರು 20 ಮಂದಿಯ ತಂಡ ಈ ಆಧುನಿಕ ಮತಯಂತ್ರಗಳ ನಿರ್ವಹಣೆ ಸಂಬಂಧ ಜಿಲ್ಲೆಯ ಚುನಾವಣಾ ಸಿಬ್ಬಂದಿಗಳಿಗೆ ಮಾಹಿತಿ ಒದಗಿಸಲು ಬಂದಿದ್ದ ರೆಂದು ಮೂಲಗಳಿಂದ ಗೊತ್ತಾಗಿದೆ.

ಆ ಪ್ರಕಾರ ಈಗಾಗಲೇ ಜಿಲ್ಲೆಗೆ ತರಿಸಲಾಗಿರುವ ಸುಮಾರು 850 ಬಿ.ಯು. ಉಪಕರಣಗಳು, 710 ರಷ್ಟು ಸಿ.ಯು.

(ಮೊದಲ ಪುಟದಿಂದ) ಹಾಗೂ 690 ವಿವಿಪಿಎಟಿ ಯಂತ್ರಗಳನ್ನು ಕಳೆದ ಹತ್ತು ದಿನಗಳ ಕಾಲ ರಾಜಕೀಯ ಪ್ರತಿನಿಧಿಗಳ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿ, ಭದ್ರತಾ ವ್ಯವಸ್ಥೆಯಲ್ಲಿ ಇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ. ಕಳೆದ ಫೆಬ್ರವರಿ 28 ರಿಂದ ಆರಂಭಿಸಿರುವ ಮತಯಂತ್ರಗಳ ಗುಣಮಟ್ಟ ಹಾಗೂ ದೋಷ ರಹಿತ ನಿರ್ವಹಣೆಯ ಬಗ್ಗೆ ಖಾತರಿಪಡಿಸಿಕೊಳ್ಳಲು ತಾ. 9ರ ಸಂಜೆ ತನಕ ತಪಾಸಣೆಯನ್ನು ನಡೆಸಿರುವದಾಗಿ ತಿಳಿದು ಬಂದಿದೆ. ಆನಂತರ ತಂತ್ರಜ್ಞರ ತಂಡ ರಾಜಧಾನಿ ಬೆಂಗಳೂರಿಗೆ ತಮ್ಮ ಕೆಲಸ ಪೂರೈಸಲು ಹಿಂತೆರಳಿದ್ದಾರೆ.

41 ಮಂದಿಯ ತರಬೇತಿ : ಮತಯಂತ್ರಗಳ ತಪಾಸಣೆಯ ಬೆನ್ನಲ್ಲೇ ಜಿಲ್ಲಾಡಳಿತವು ಯಾವದೇ ಸಂದರ್ಭ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಿಸಿದರೆ, ಅದನ್ನು ಸಮರ್ಪ ಕವಾಗಿ ಎದುರಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದ್ದು, ಜಿಲ್ಲೆಯ 41 ಮಂದಿ ಇಲಾಖಾಧಿಕಾರಿಗಳಿಗೆ ಈ ಸಂಬಂಧ ತರಬೇತಿಗೊಳಿಸಿ, ಕೊಡಗಿನೆಲ್ಲೆಡೆ ಮತದಾರರ ಹಿತ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದೆ. ಕೊಡಗಿನೆಲ್ಲೆಡೆ ವಿಶೇಷವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸೇರಿದಂತೆ ದುರ್ಬಲರು, ಮಹಿಳೆಯರು ಮುಕ್ತ ವಾತಾವರಣದಲ್ಲಿ ಚುನಾವಣೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಜಿಲ್ಲಾ ಚುನಾವಣಾಧಿಕಾರಿ ನಿರ್ದೇಶನದೊಂದಿಗೆ ಕಾರ್ಯಕ್ಷೇತ್ರಕ್ಕೆ ಈ ಮಂದಿಯನ್ನು ನಿಯೋಜಿಸಿರುವದಾಗಿಯೂ ಮೂಲಗಳಿಂದ ಗೊತ್ತಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಮುಂಬರುವ ವಿಧಾನಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ರಣನೀತಿಯಲ್ಲಿ ತೊಡಗಿರುವ ಬೆನ್ನಲ್ಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತವು ಮತದಾನ ಪ್ರಕ್ರಿಯೆಯನ್ನು ಶಾಂತಿ ಹಾಗೂ ಪಾರದರ್ಶಕ ರೀತಿಯಲ್ಲಿ ನಿರ್ವಹಣೆಗೆ ಕಾರ್ಯತಂತ್ರ ರೂಪಿಸುತ್ತಿರುವದು ಗೋಚರಿಸಿದೆ.