ಮಡಿಕೇರಿ, ಮಾ. 11: ಮಧ್ಯಾಹ್ನದ ಉರಿಬಿಸಿಲಿನ ನಡುವೆಯೇ ಇಂದು ನಗರದ ಚೈನ್‍ಗೇಟ್ ಬಳಿ, ಪೊಲೀಸ್ ಇಲಾಖೆ ಹಾಗೂ ಇತರ ಸರಕಾರಿ ವಸತಿಗೃಹಗಳಿಗೆ ಹೊಂದಿಕೊಂಡಿರುವ ಕಾಡಿಗೆ ಬೆಂಕಿಕೊಟ್ಟು ಕಿಡಿಗೇಡಿಗಳು ಆತಂಕ ಸೃಷ್ಟಿಸಿದ ಕೃತ್ಯ ನಡೆಯಿತು.ಅರಣ್ಯ ಭವನದಿಂದ ಅನತಿ ದೂರದ ರಸ್ತೆಯ ಬದಿಯಲ್ಲಿ ಸುಮಾರು ಒಂದು ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಹಾಗೂ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರ ಸಹಿತ ಪ್ರಯಾಣಿಕರು ಆತಂಕಗೊಳ್ಳುವಂತಾಯಿತು.ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಮತ್ತು ಇತರ ಇಲಾಖೆಗಳ (ಮೊದಲ ಪುಟದಿಂದ) ವಸತಿಗೃಹದಲ್ಲಿದ್ದವರು ಬೆಂಕಿ ನಂದಿಸಲು ಹರಸಾಹಸ ನಡೆಸಿದರು. ಇತ್ತ ಅಗ್ನಿ ಶಾಮಕ ದಳ ಸಕಾಲದಲ್ಲಿ ಧಾವಿಸಿ ನೀರು ಹಾಯಿಸಿ ಬೆಂಕಿ ಹತೋಟಿಗೆ ತರುವದರೊಂದಿಗೆ ಹೆಚ್ಚಿನ ಅನಾಹುತ ತಪ್ಪಿಸಿತು.ಬೇಸಿಗೆಯಲ್ಲಿ ಇಂತಹ ತಿಳಿಗೇಡಿ ಕೃತ್ಯಗಳಿಗೆ ಅವಕಾಶವಾಗದಂತೆ ಹೆದ್ದಾರಿ ಬದಿ ಕಾಡು, ಗಿಡಗಂಟಿಗಳನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆಗಳು ತಳೆಯುವ ನಿರ್ಲಕ್ಷ್ಯದಿಂದ ಕಾಡ್ಗಿಚ್ಚು ಎದುರಾಗುತ್ತಿದೆ ಎಂಬ ಅಸಮಾಧಾನ ನಾಗರಿಕರಿಂದ ವ್ಯಕ್ತಗೊಂಡಿದೆ.