ಗುಡ್ಡೆಹೊಸೂರು/ ಕುಶಾಲನಗರ, ಮಾ. 11: ಜಿಲ್ಲೆಗೆ ಆಗಮಿಸಿದ್ದ ತಮಿಳುನಾಡು ರಾಜ್ಯದ ಪ್ರವಾಸಿ ತಂಡದ ವಿದ್ಯಾರ್ಥಿಯೊಬ್ಬ ಕಾವೇರಿ ನದಿಯಲ್ಲಿ ಈಜಲು ತೆರಳುವಾಗ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ಘಟನೆ ಸಂಭವಿಸಿದ್ದು ಪ್ರಶಾಂತ್ (20) ಎಂಬಾತ ಮೃತ ದುರ್ದೈವಿ. ಕೊಯಮತ್ತೂರು ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಜಿಲ್ಲೆಗೆ ಆಗಮಿಸಿದ್ದು ಈ ಸಂದರ್ಭ ತೆಪ್ಪದಕಂಡಿ ತೂಗುಸೇತುವೆ ಬಳಿ ಈಜಲು ತೆರಳಿದ್ದಾರೆ.
ಈ ವ್ಯಾಪ್ತಿಯಲ್ಲಿ ಬಂಡೆಗಳ ನಡುವೆ ಆಳವಾದ ಗುಂಡಿಯಿದ್ದು, ಯುವಕ ಮುಳುಗಿ ಮೃತಪಟ್ಟಿರುವದಾಗಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನವೀನ್ ಗೌಡ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು ಕುಶಾಲನಗರ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಾಗಿದೆ.
ಮೃತನ ಪೋಷಕರಿಗೆ ಮಾಹಿತಿ ರವಾನಿಸಲಾಗಿದ್ದು, ಶವವನ್ನು ಕಾನೂನು ಕ್ರಮದೊಂದಿಗೆ ಹಸ್ತಾಂತರಿಸಲಾಗುವದು ಎಂದು ಪೊಲೀಸ್ ಮೂಲಗಳು ಸುಳಿವು ನೀಡಿವೆ.