ಸೋಮವಾರಪೇಟೆ, ಮಾ. 11: ಇದೇ ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಆಡಳಿತ ವರ್ಗ ಭರದ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತಿ ರುವದು ಒಂದೆಡೆಯಾದರೆ, ಪ್ರಮುಖ ರಾಜಕೀಯ ಪಕ್ಷಗಳು ಮತದಾರರ ಮನವೊಲಿಸಲು ಹೆಣಗಾಡುತ್ತಿವೆ. ಈ ಮಧ್ಯೆ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮತದಾರರು ಮಾತ್ರ ಯಾರಿಗೆ ಟಿಕೆಟ್-ಯಾರು ಕ್ಯಾಂಡಿಡೇಟ್? ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.ಮಾರ್ಕೆಟ್, ಹೊಟೇಲ್, ಕಚೇರಿ, ಅಂಗಡಿಗಳು, ಸೆಲೂನ್‍ಗಳು, ಬಸ್ ನಿಲ್ದಾಣಗಳಿಂದ ಹಿಡಿದು ಗ್ರಾಮೀಣ ಭಾಗದ ಕಾಫಿ ತೋಟಗಳು, ಗದ್ದೆಗಳಲ್ಲಿ ಕೆಲಸ ಮಾಡುವವರೂ ಸಹ ರಾಜಕೀಯದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡುಬರುತ್ತಿದ್ದು, ಎಲ್ಲೆಂದರಲ್ಲಿ ರಾಜಕೀಯದ ಚರ್ಚೆಗಳೇ ನಡೆಯುತ್ತಿವೆ.

ಇದರೊಂದಿಗೆ ಪಕ್ಷದ ಕಚೇರಿಗಳು ಚಟುವಟಿಕೆಗಳ ಕೇಂದ್ರವಾಗಿದ್ದು, ಪ್ರತಿದಿನ ಕಾರ್ಯಕರ್ತರು, ಮುಖಂಡರು ಕಚೇರಿಗೆ ಭೇಟಿ ನೀಡುತ್ತಾ ರಾಜಕೀಯ ಚರ್ಚೆಯಲ್ಲೇ ಮಗ್ನರಾಗಿದ್ದಾರೆ. ಅಲ್ಲಲ್ಲಿ ಸಮಾವೇಶ, ಗ್ರಾಮ, ಬೂತ್‍ಮಟ್ಟದಲ್ಲಿ ಸಭೆಗಳು, ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ..ಹೀಗೆ ಪಕ್ಷಗಳ ಒಂದಿಲ್ಲೊಂದು ಕಾರ್ಯಕ್ರಮಗಳು ಜಿಲ್ಲಾದ್ಯಂತ ನಡೆಯುತ್ತಲೇ ಇವೆ.

ಪ್ರಚಾರದಲ್ಲಿ ಜೆಡಿಎಸ್ ಮುಂದೆ: ಇದೇ ಮೊದಲ ಬಾರಿಗೆ ಎಂಬಂತೆ ಜಾತ್ಯತೀತ ಜನತಾದಳದಿಂದ ಚುನಾವಣೆಗೂ ಎರಡು ತಿಂಗಳ ಮೊದಲೇ ಅಭ್ಯರ್ಥಿಗಳ ಘೋಷಣೆ ಯಾಗಿದ್ದು, ಈ ಕ್ಷಣದ ಮಟ್ಟಿಗೆ ಜೆಡಿಎಸ್ ಪ್ರಚಾರ ಕಾರ್ಯದಲ್ಲಿ ಮುಂದಿದೆ. ಬಹುತೇಕ ಗ್ರಾಮ ಪಂಚಾಯಿತಿ, ಹೋಬಳಿ ಕೇಂದ್ರಗಳಲ್ಲೂ ಸಭೆಗಳನ್ನು ನಡೆಸಲಾಗಿದ್ದು, ಈಗಾಗಲೇ 3 ಸಮಾವೇಶಗಳನ್ನೂ ನಡೆಸಿದೆ.

ಹಿಂದೆ ಬೀಳದ ಬಿಜೆಪಿ: ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅನೇಕ ವಾರ್ಡ್‍ಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಸಮಿತಿಗಳನ್ನು ರಚಿಸಿ, ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರಿಗೆ ಉತ್ಸಾಹ ತುಂಬುತ್ತಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯಿತಿ, ಶಕ್ತಿ ಕೇಂದ್ರ, ವಿವಿಧ ಘಟಕಗಳಿಗೆ ಪದಾಧಿಕಾರಿಗಳು, ಯುವ ಮೋರ್ಚಾ ಸೇರಿದಂತೆ ಬೂತ್ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸುವ ಕಾರ್ಯವನ್ನು ಸ್ವತಃ ರಂಜನ್ ಖುದ್ದು ಗಮನಹರಿಸಿ ಮುಖಂಡರ ಮೂಲಕ ಮಾಡಿಸುತ್ತಿದ್ದಾರೆ.

ಕಾಂಗ್ರೆಸ್ ಕಸರತ್ತು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವಷ್ಟು ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷವೂ ಸಹ ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ನಾಯಕರುಗಳು ಪ್ರತ್ಯೇಕ ಪ್ರತ್ಯೇಕವಾಗಿ ಸಭೆಗಳನ್ನು

(ಮೊದಲ ಪುಟದಿಂದ) ನಡೆಸುವ ಮೂಲಕ ತಮ್ಮ ಛಾಪು ಮೂಡಿಸಲು ಯತ್ನಿಸುತ್ತಿದ್ದಾರೆ.

ಈಗಾಗಲೇ ಟಿಕೆಟ್ ಆಕಾಂಕ್ಷಿ ಗಳನ್ನು ಚುನಾವಣಾ ವೀಕ್ಷಕರುಗಳು ಖುದ್ದು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿರುವ ಎಲ್ಲರೂ ಸಹ ತನಗೇ ಟಿಕೆಟ್ ಎಂದು ತಮ್ಮ ಬೆಂಬಲಿಗರೊಂದಿಗೆ ಹೇಳಿಕೊಂಡು ತಿರುಗುತ್ತಿದ್ದು, ತಮ್ಮ ಬೆಂಬಲಿಗರಲ್ಲೂ ಗೊಂದಲ ಉಂಟು ಮಾಡುತ್ತಿದ್ದಾರೆ.

ಕಳೆದ ಬಾರಿ ಯಾರು?: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ 1,53,934 ಮತಗಳು ಚಲಾವಣೆಗೊಂಡಿದ್ದವು. ಬಿಜೆಪಿ ಅಭ್ಯರ್ಥಿಯಾಗಿ ಎಂ.ಪಿ. ಅಪ್ಪಚ್ಚು ರಂಜನ್ (56696ಮತಗಳು) ಜೆಡಿಎಸ್‍ನಿಂದ ಬಿ.ಎ. ಜೀವಿಜಯ (52076) ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಂ. ಲೋಕೇಶ್ (32313) ಕೆಜೆಪಿಯಿಂದ ಎನ್.ಎನ್. ಶಂಭುಲಿಂಗಪ್ಪ (5714) ಉಳಿದಂತೆ ಎಸ್.ಪಿ. ಮಹದೇವಪ್ಪ, ಕೆ.ಎಂ. ಬಶೀರ್, ಡಿ.ಎನ್. ವನಜಾಕ್ಷಿ ನಿರ್ವಾಣಪ್ಪ, ಡಿ.ಎಸ್. ಗುರುಪ್ರಸಾದ್, ಸಿ.ವಿ. ನಾಗೇಶ್, ಎಂ.ಎ. ನಿಜಾಮುದ್ದೀನ್, ಡಾ. ಬಿ.ಸಿ. ನಂಜಪ್ಪ, ಸಂತೋಷ್‍ಕುಮಾರ್ ಎಂ.ವಿ., ರಫೀಕ್, ಹರೀಶ್ ಪೂವಯ್ಯ ಅವರುಗಳು ಸ್ಪರ್ಧಿಸಿದ್ದರು.

ಜೆಡಿಎಸ್ ಓಡಾಟ: ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಘೋಷಣೆಯಾಗಿದ್ದು, ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಈಗಾಗಲೇ ಪ್ರಚಾರ ಕಾರ್ಯಕ್ಕೆ ವೇಗ ನೀಡಿದ್ದಾರೆ. ಕ್ಷೇತ್ರದಾದ್ಯಂತ ಒಂದು ಸುತ್ತಿನ ಭೇಟಿ ಮುಕ್ತಾಯಗೊಂಡಿದೆ. ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್‍ಪೂವಯ್ಯ ಅವರೂ ಸಹ ಜೀವಿಜಯ ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದು, ಈ ಭಾಗದಲ್ಲಿ ನಡೆಯುವ ಎಲ್ಲಾ ಸಭೆ, ಸಮಾರಂಭಗಳಲ್ಲೂ ಭಾಗವಹಿಸುತ್ತಾ, ರಾಷ್ಟ್ರೀಯ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ.

ಫೀಲ್ಡ್‍ಗಿಳಿದ ರಂಜನ್: ಬಿಜೆಪಿಯಿಂದ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ಎಂದು ರಾಜ್ಯಾಧ್ಯಕ್ಷರು ಪರೋಕ್ಷವಾಗಿ ಸೂಚಿಸಿದ್ದರೂ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ. ಮಾಜೀ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಹಿರಿಯ ಬಿಜೆಪಿ ಮುಖಂಡ ಶಾಂತವೇರಿ ವಸಂತ್‍ಕುಮಾರ್, ಜಿ.ಪಂ. ಮಾಜೀ ಸದಸ್ಯ ಡಿ.ಬಿ. ಧರ್ಮಪ್ಪ, ಕೃಷಿಕ ಸಮಾಜದ ಅಧ್ಯಕ್ಷ ತಾಕೇರಿ ಪೊನ್ನಪ್ಪ ಅವರುಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿಯೂ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ದೊರಕಲಿದೆ ಎಂಬ ವಿಶ್ವಾಸದಲ್ಲಿ ಶಾಸಕರ ಆಪ್ತರು ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡು ಓಡಾಡುತ್ತಿದ್ದಾರೆ. ಇವರೊಂದಿಗೆ ಜಿಲ್ಲಾಧ್ಯಕ್ಷರೂ ಭಾಗಿಯಾಗುತ್ತಿದ್ದರೆ, ಕೆಲವರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ಸೋಮವಾರಪೇಟೆಯಲ್ಲಿ ನಡೆದ ಯುವ ಮೋರ್ಚಾ ಸಮಾವೇಶಕ್ಕೆ ನಿರೀಕ್ಷೆಗಿಂತ ಹೆಚ್ಚು ಮಂದಿ ಭಾಗಿಯಾದುದು, ಮಡಿಕೇರಿಯಲ್ಲಿ ನಡೆದ ಪರಿವರ್ತನಾ ಯಾತ್ರೆ, ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ಸಮಾರೋಪ, ಮೈಸೂರಿನಲ್ಲಿ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ನಡೆದ ‘ಈ ಬಾರಿ ಬಿಜೆಪಿ’ ಸಮಾವೇಶಕ್ಕೆ ಜನರನ್ನು ಸೇರಿಸುವಲ್ಲಿ ಸ್ವತಃ ರಂಜನ್ ಹೆಚ್ಚಿನ ಮುತುವರ್ಜಿ ವಹಿಸಿರುವದು ಕಂಡುಬಂದಿದ್ದು, ಈಗಾಗಲೇ ರಂಜನ್ ಫೀಲ್ಡ್‍ಗಿಳಿದಿದ್ದಾರೆ. ಇವರಿಗೇ ಟಿಕೆಟ್ ಪಕ್ಕಾ ಆಗಿದೆ ಎಂಬ ಮಾತುಗಳು ಬಿಜೆಪಿ ಮೂಲಗಳಿಂದ ಕೇಳಿಬರುತ್ತಿವೆ.

ಈ ನಡುವೆ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಪರಿವರ್ತನಾ ಯಾತ್ರೆಯಲ್ಲಿ ಭಾವಿ ಶಾಸಕರು ಎಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಹೇಳಿರುವದರಿಂದ ಇತರ ಟಿಕೆಟ್ ಆಕಾಂಕ್ಷಿಗಳಲ್ಲಿ ನಿರಾಶೆ ಮೂಡಿದ್ದರೂ ಪ್ರಯತ್ನ ಕೈಬಿಟ್ಟಿಲ್ಲ. ‘ರಾಜ್ಯಾಧ್ಯಕ್ಷರ ಮೇಲೆ ಒತ್ತಡ ಹೇರಿ ಈ ಮಾತು ಆಡಿಸಿದ್ದಾರೆ’ ಎಂದು ಇತರ ಕೆಲವು ಆಕಾಂಕ್ಷಿಗಳು ಅಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಮುಖಂಡರಿಂದ ಶಕ್ತಿಪ್ರದರ್ಶನ: ಇನ್ನು ಕಾಂಗ್ರೆಸ್‍ನಲ್ಲಿ ಮುಖಂಡರ ಶಕ್ತಿ ಪ್ರದರ್ಶನ ನಡೆಯುತ್ತಿದ್ದು, ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ವೀಕ್ಷಕರ ಎದುರು ಬಲಪ್ರದರ್ಶನ ಮಾಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆ.ಎಂ. ಲೋಕೇಶ್, ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಂದ್ರಮೌಳಿ, ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ಆಲೂರು ಸಿದ್ದಾಪುರದ ವಿರೂಪಾಕ್ಷಯ್ಯ, ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ ಅವರುಗಳು ಕಾಂಗ್ರೆಸ್‍ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಈ ಎಲ್ಲಾ ನಾಯಕರು ರಾಜ್ಯಮಟ್ಟದ ಮುಖಂಡರ ಮೂಲಕ ಟಿಕೆಟ್‍ಗಾಗಿ ಪ್ರಯತ್ನಿಸುತ್ತಿದ್ದು, ಸ್ಥಳೀಯವಾಗಿ ಬೆಂಬಲಿಗರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕೆ.ಎಂ. ಲೋಕೇಶ್‍ಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿದ್ದರೆ, ಕೆ.ಪಿ. ಚಂದ್ರಕಲಾ ತನಗೇ ಟಿಕೆಟ್ ಎನ್ನುತ್ತಿದ್ದಾರೆ.

‘ಕಾದು ನೋಡಿ’ ಎಂದು ಚಂದ್ರಮೌಳಿ ಕಿರುನಗೆ ಬೀರುತ್ತಿದ್ದರೆ, ವಿರೂಪಾಕ್ಷಯ್ಯ ಅವರು ಪಕ್ಷದ ಮುಖಂಡರ ಮನೆ, ಕಚೇರಿಗಳಿಗೆ ತೆರಳಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ನಾವು ಮಡಿಕೇರಿ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲೂ ಸಂಘಟನೆಯನ್ನು ಗಟ್ಟಿಗೊಳಿಸಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ಐಎನ್‍ಟಿ ಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರು ಹೇಳುತ್ತಿದ್ದಾರೆ.

ಒಟ್ಟಾರೆ ಜೆಡಿಎಸ್ ಅಭ್ಯರ್ಥಿಗಳು ಯಾರು ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಲಭಿಸಿದ್ದು, ‘ಬಿಜೆಪಿ ಮತ್ತು ಕಾಂಗ್ರೆಸ್‍ನಿಂದ ಯಾರ್ಯಾರಿಗೆ ಟಿಕೆಟ್’ ಎಂಬ ಚರ್ಚೆಗಳು ರಾಜಕೀಯ ಮೊಗಸಾಲೆ ಯಿಂದ ಆಚೆಗೂ ನಡೆಯುತ್ತಲೇ ಇದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಒಂದೆರಡು ವಾರದಲ್ಲಿ ಸ್ಪಷ್ಟ ಚಿತ್ರಣ