ಮಡಿಕೇರಿ, ಮಾ. 11: ವಿವಿಧ ರಾಜಕೀಯ ಪಕ್ಷಗಳು ವಿವಿಧೆಡೆ ಏರ್ಪಡಿಸಲಾದ ಸಭೆ, ಕಾರ್ಯಕ್ರಮಗಳ ವಿವರ.ಕಾಂಗ್ರೆಸ್ ಗೆಲ್ಲಿಸಲು ಕರೆಮಡಿಕೇರಿ: ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಯಾರೇ ಆದರೂ ಪಕ್ಷದ ಗೆಲುವಿಗೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅವಿರತ ಶ್ರಮ ವಹಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವೆಂಕಪ್ಪಗೌಡ ಕರೆ ನೀಡಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷ ಸಂಘಟನೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಆಯ್ಕೆ ಪ್ರಕ್ರಿಯೆ ಸಧ್ಯದಲ್ಲಿಯೇ ಪೂರ್ಣಗೊಳ್ಳಲಿದ್ದು, ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕೆಂದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಅಪ್ರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಎ. ಯಾಕೂಬ್, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ಉಪಾಧ್ಯಕ್ಷ ಜೋಸೆಫ್, ಶ್ಯಾಂ, ವಲಯಾಧ್ಯಕ್ಷರುಗಳು, ಬೂತ್ ಅಧ್ಯಕ್ಷರು, ಬೂತ್ ಬಿ.ಎಲ್.ಎ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ಕೊಡಗಿನವರಿಗೆ ಅವಕಾಶಕ್ಕೆ ಮನವಿ
ಮಡಿಕೇರಿ: ರಾಜ್ಯಸಭಾ ಚುನಾವಣೆಯಲ್ಲಿ ಕೊಡಗಿನವರಿಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸುವದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾ. 23 ರಂದು ರಾಜ್ಯಸಭೆಗೆ ನಾಲ್ವರನ್ನು ಕಳುಹಿಸುವ ಸಲುವಾಗಿ ಚುನಾವಣೆ ನಡೆಯುತ್ತಿದ್ದು, ಕೊಡಗಿನಿಂದ ಒಬ್ಬರಿಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗುವದೆಂದು ಹೇಳಿದ್ದಾರೆ. ಹಿರಿಯ ಕಾಂಗ್ರೆಸಿಗ ಮಿಟ್ಟು ಚಂಗಪ್ಪ ಅಥವಾ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಅವರಿಗೆ ಅವಕಾಶ ಕಲ್ಪಿಸಬೇಕೆಂದು ಟಾಟೂ ಮೊಣ್ಣಪ್ಪ ತಿಳಿಸಿದ್ದಾರೆ.
ಜೆ.ಡಿ.ಎಸ್.ನಿಂದ ರೈತರ ಸಾಲ ಮನ್ನಾ
ಸೋಮವಾರಪೇಟೆ: ರೈತಪರ ಕಾಳಜಿಯಿರುವ ಜೆಡಿಎಸ್‍ನ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, 24 ಗಂಟೆಯ ಒಳಗೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಿದ್ದಾರೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದರು.
ತಾಕೇರಿ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸೋಮವಾರಪೇಟೆವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ಡಿ.ಕೆ.ರವಿ, ಜಾನಕಿ ವೆಂಕಟೇಶ್, ಸಂಜಯ್ ಜೀವಿಜಯ, ಕೆ.ಟಿ. ಪರಮೇಶ್, ಎಸ್.ಎಂ. ಡಿಸಿಲ್ವಾ, ಹೆಚ್.ಬಿ. ಜಯಮ್ಮ, ಕಾಟ್ನಮನೆ ವಿಠಲ್‍ಗೌಡ, ಪ್ರವೀಣ್, ಬಸವಯ್ಯ ಇದ್ದರು.
ಜೆ.ಡಿ.ಎಸ್.ಗೆ ಸೇರ್ಪಡೆ
ಗೋಣಿಕೊಪ್ಪಲು: ಶ್ರೀಮಂಗಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯೆ ಅಜ್ಜಮಾಡ ಮುತ್ತಮ್ಮ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವೀರಾಜಪೇಟೆ ಪುರಭವನದಲ್ಲಿ ಆಯೋಜಗೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ಇವರನ್ನು ಪಕ್ಷದ ಹಿರಿಯ ಮುಖಂಡರಾದ ಬಿ.ಎ. ಜೀವಿಜಯ, ಸಂಕೇತ್ ಪೂವಯ್ಯ, ಮನೆಯಪಂಡ ಬೆಳ್ಯಪ್ಪ, ಹೊಸೂರು ಸತೀಶ್ ಜೋಯಪ್ಪ, ಎಂ.ಹೆಚ್. ಮತೀನ್ ಹಾಗೂ ಇತರ ಮುಖಂಡರು ಬರಮಾಡಿಕೊಂಡರು.ಹಿತ್ತಲಕೇರಿಯಲ್ಲಿ ಜೆಡಿಎಸ್ ಸಮಾವೇಶ
ಒಡೆಯನಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿರುವದರಿಂದ ಈ ಬಾರಿಯೂ ಚುನಾವಣೆಯಲ್ಲಿ ಜನರು ರಾಜ್ಯದ ಆಡಳಿತದಲ್ಲಿ ಬದಲಾವಣೆ ತರಲು ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಕಾಲ ಕೂಡಿಬಂದಿದೆ ಎಂದು ಮಾಜಿ ಸಚಿವ ಮತ್ತು ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ವಿಶ್ವಾಸ ವ್ಯಕ್ತಪಡಿಸಿದರು.
ಹಿತ್ತಲಕೇರಿ ಗ್ರಾಮದ ಆಟದ ಮೈದಾನದಲ್ಲಿ ಶನಿವಾರಸಂತೆ ಹೋಬಳಿ ಮತ್ತು ನಿಡ್ತ ಗ್ರಾ.ಪಂ. ವ್ಯಾಪ್ತಿಯ ಜೆಡಿಎಸ್ ಮತ್ತು ಬಿಎಸ್‍ಪಿ ಘಟಕದ ವತಿಯಿಂದ ಆಯೋಜನೆ ಮಾಡಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಹಾಗೂ ಈಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳ ದುರಾಡಳಿತ, ರೈತರ ಆತ್ಮಹತ್ಯೆ, ಕೋಮು ಗಲಭೆ ಮುಂತಾದ ಸಮಸ್ಯೆಗಳಿಗೆ ನುಲುಗಿ ಹೋಗಿರುವ ಜನತೆ ಈ ಭಾರಿಯ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
ಬಿಎಸ್‍ಪಿ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ಬಿಎಸ್‍ಪಿ ವರಿಷ್ಠೆ ಮಾಯಾವತಿ ನೇತೃತ್ವದ ಬಿಎಸ್‍ಪಿ ಪಕ್ಷ ಯಾವದೇ ಜಾತಿ-ಧರ್ಮಕ್ಕೆ ಮೀಸಲಾದ ಪಕ್ಷವಲ್ಲ. ದೇಶ ಮತ್ತು ಸಂವಿಧಾನಕ್ಕೆ ಗೌರವ ನೀಡುವ ಪಕ್ಷವಾಗಿದ್ದು, ದೇಶದ ರಾಷ್ಟ್ರೀಯ ಪಕ್ಷಗಳಲ್ಲಿ 3 ನೇ ರಾಷ್ಟ್ರೀಯ ಪಕ್ಷವಾಗಿರುವ ಬಿಎಸ್‍ಪಿ ತನ್ನದೆ ತತ್ವ-ಸಿದ್ಧಾಂತಗಳನ್ನು ಇಟ್ಟು ಕೊಂಡಿದೆ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಾತಿ, ಧರ್ಮ, ಜನಾಂಗವನ್ನು ಒಡೆಯುವ ಅವಕಾಶವಾದಿ ಪಕ್ಷಗಳಾಗಿದ್ದು, ರಾಜ್ಯದ ಅಭಿವೃದ್ಧಿಯ ವಿಚಾರ, ಜಾತಿ, ಧರ್ಮ, ಬಡವ ಬಲ್ಲಿದ ಎಲ್ಲರೂ ಒಂದೆ ಎಂಬ ತತ್ವದಡಿಯಲ್ಲಿ ಹೋರಾಟ ನಡೆಸುತ್ತಿರುವ ಬಿಎಸ್‍ಪಿ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ನಿಲುವುಗಳು ಒಂದೆಯಾಗಿರುವ ನಿಟ್ಟಿನಲ್ಲಿ ಬಿಎಸ್‍ಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಚುನಾವಣೆಯಲ್ಲಿ ಬಿಎಸ್‍ಪಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಮತ್ತೆ ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದರು.
ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಕಳೆದ 4 ಅವಧಿಯಲ್ಲಿ ಬಿಜೆಪಿ ಶಾಸಕರಿಂದ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ, ಅದರಲ್ಲೂ ಮಡಿಕೇರಿ ಕ್ಷೇತ್ರದ ಶಾಸಕರು ರಾಜ್ಯದಲ್ಲೇ ಅತ್ಯಂತ ನಿಷ್ಕ್ರೀಯ ಶಾಸಕರಾಗಿದ್ದು ಇಲ್ಲಿಯತನಕ ಮಡಿಕೇರಿ ಕ್ಷೇತ್ರ ಕಿಂಚಿತ್ತೂ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು.
ಶನಿವಾರಸಂತೆ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಆದಿಲ್ ಪಾಷ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ದೂರ ಇಟ್ಟು ಜನರ, ರೈತರ ಸಂಕಷ್ಟದಲ್ಲಿ ಸದಾ ಜೊತೆಯಲ್ಲಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಸಲುವಾಗಿ ಬೂತ್‍ಮಟ್ಟ ಮತ್ತು ಹೋಬಳಿ ಮಟ್ಟದಲ್ಲಿ ಪಕ್ಷದ ಸಮಾವೇಶವನ್ನು ನಡೆಸಲಾಗುತ್ತಿದೆ ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಜಯಗಳಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹೆಚ್ಚಿನ ಶ್ರಮವಹಿಸಬೇಕೆಂದರು.
ಸಮಾವೇಶದಲ್ಲಿ ಪಕ್ಷದ ಮುಖಂಡರಾದ ಹೆಚ್.ಪಿ. ಶೇಷಾದ್ರಿ, ಎನ್.ಬಿ. ನಾಗಪ್ಪ, ಹೆಚ್.ಬಿ. ಜಯಮ್ಮ ಮಾತನಾಡಿದರು. ಸಮಾವೇಶದಲ್ಲಿ ನಿಡ್ತ ಪಂಚಾಯಿತಿ ಜೆಡಿಎಸ್ ಘಟಕದ ಅಧ್ಯಕ್ಷ ಎನ್.ಜಿ. ಅನಿಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೆಡಿಎಸ್ ಜನತದಳದ ಅಧ್ಯಕ್ಷ ಸಿ.ಎನ್. ವಿಶ್ವ, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಪಕ್ಷದ ಪ್ರಮುಖರಾದ ಡಿ.ಬಿ. ಬೋಜಪ್ಪ, ಚನ್ನಬಸಪ್ಪ, ಲತಾ ದೇವರಾಜ್, ನಂದಿನಿ ಚಂದ್ರಶೇಖರ್, ಎ.ಜಿ. ವಿಜಯ್, ಎನ್.ಕೆ. ಅಪ್ಪಸ್ವಾಮಿ, ಹೆಚ್.ಜೆ. ಪ್ರಸನ್ನ ಮುಂತಾದವರಿದ್ದರು. ಈ ಸಂದರ್ಭ ನಿಡ್ತ ವ್ಯಾಪ್ತಿಯಿಂದ ಹಲವಾರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಗ್ರಾ.ಪಂ.ಗಳಿಕೆ ಬೆಳಕಿನ ಭಾಗ್ಯ
ಗೋಣಿಕೊಪ್ಪಲು: ಜಿಲ್ಲೆಯ ಹಲವು ಪಂಚಾಯಿತಿಯ ಫಲಾನುಭವಿಗಳಿಗೆ ಬೆಳಕಿನ ಭಾಗ್ಯ ವಿತರಣೆಯು ನಡೆಯುತ್ತಿದ್ದು, ಇದರ ಮುಂದುವರೆದ ಭಾಗವಾಗಿ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪ ಹಾಗೂ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 42 ಫಲಾನುಭವಿಗಳಿಗೆ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಸೋಲಾರ್ ದೀಪಗಳನ್ನು ವಿತರಿಸಿದರು.
ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ಅಯೋಜನೆಗೊಂಡಿದ್ದ ಸೋಲಾರ್ ವಿತರಣೆ ಕಾರ್ಯಕ್ರಮದಲ್ಲಿ 42 ಫಲಾನುಭವಿಗಳಿಗೆ ಸೋಲಾರ್ ದೀಪವನ್ನು ವಿತರಿಸಿ ಮಾತನಾಡಿದ ಪದ್ಮಿನಿ ಪೊನ್ನಪ್ಪ ಜಿಲ್ಲೆಯ ವಿವಿಧೆಡೆ ಎರಡು ಸಾವಿರಕ್ಕೂ ಅಧಿಕ ಸೋಲಾರ್ ದೀಪಗಳನ್ನು ಈಗಾಗಲೇ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ತೀತಿರ ಧರ್ಮಜ, ಕಾರ್ಯದರ್ಶಿಗಳಾದ ಕಾಡ್ಯಮಾಡ ಚೇತನ್, ಎ.ಜೆ. ಬಾಬು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಹಾತೂರು ಝೋನಲ್ ಅಧ್ಯಕ್ಷ ರಾಮಚಂದ್ರ, ರೂಪ ಭೀಮಯ್ಯ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಕಲೀಂಮುಲ್ಲಾ, ಪ್ರಮೋದ್ ಗಣಪತಿ, ಮಂಜುಳ, ಕೊಂಗಂಡ ಮಮಿತಾ, ಶಾಹಿನ್, ರಾಜಶೇಖರ್, ಕಾಂಗ್ರೆಸ್ ಪ್ರಮುಖರಾದ ಸರ್ಪುದ್ದೀನ್, ಸಲಾಂ, ಹರಿದಾಸ್ ಮಣಿ, ಕಂದಾ ದೇವಯ್ಯ, ಧನಲಕ್ಷ್ಮಿ, ಕೊಂಗಂಡ ಮನೋಜ್, ಒಬಿಸಿ ಆಧ್ಯಕ್ಷ ನಾರಾಯಣ ಸ್ವಾಮಿ ನಾಯ್ಡು ಮುಂತಾದವರು ಹಾಜರಿದ್ದರು.
ಉದ್ಯೋಗ ಮೇಳದಲ್ಲಿ ಅಸಮಾಧಾನ
ಸೋಮವಾರಪೇಟೆ: ಜಿಲ್ಲಾ ಬಿ.ಜೆ.ಪಿ. ಮತ್ತು ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಉದ್ಯೋಗ ಮೇಳ ನಡೆಯಿತು.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮ, ಪದವಿ, ಸ್ನಾತಕೋತರ, ವೃತ್ತಿ ಶಿಕ್ಷಣ ಸೇರಿದಂತೆ ವಿವಿಧ ತರಬೇತಿಗಳನ್ನು ಪಡೆದಿರುವ ನೂರಾರು ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಸಂದರ್ಶನದಲ್ಲಿ ಭಾಗವಹಿಸಿದರು.
ವಿವಿಧ ಕಂಪೆನಿಗಳಿಂದ ತೆರೆಯಲಾಗಿದ್ದ ಮಳಿಗೆಗಳಿಗೆ ಭೇಟಿ ನೀಡಿದ ಉದ್ಯೋಗಾಕಾಂಕ್ಷಿಗಳು ಮಾಹಿತಿ ಪಡೆದು, ಹೆಸರು ನೋಂದಾಯಿಸಿಕೊಂಡರು. ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸದೆ ಇರುವದರಿಂದ ಕೆಲ ಉದ್ಯೋಗಾಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ಕಾಬ್ ಸೆಟ್ ಉದ್ಯೋಗ ತರಬೇತಿ ಸಂಸ್ಥೆ, ಪ್ರಧಾನ ಮಂತ್ರಿ ಕುಶಲ್ ಕೇಂದ್ರ, ಬಿ.ಎಸ್.ಎಲ್. ಹಿಮಾಂನ್ಸೆ ಸಿಂಗ್ ಕಾ ಸಂಸ್ಥೆ, ಉಡ್‍ಲ್ಯಾಂಡ್ಸ್, ತಾಜ್ ಸಂಸ್ಥೆ, ಉದ್ಯೋಗಮೇಳದಲ್ಲಿ ಪಾಲ್ಗೊಂಡಿದ್ದವು. ಬೃಹತ್ ಉದ್ಯೋಗಮೇಳ ಮತ್ತು ಕೊಡಗು ಜಾಬ್ ಪೋರ್ಟಲ್ ವೆಬ್‍ಸೈಟ್‍ಗೆ ಚಾಲನೆ ನೀಡಿದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೇಂದ್ರ ಸರಕಾರವು ಅಭಿವೃದ್ಧಿಯ ಚಿಂತನೆಯೊಂದಿಗೆ ಸ್ವಾಭಿಮಾನಿ, ಸ್ವಾವಲಂಭಿ ರಾಷ್ಟ್ರದ ನಿರ್ಮಾಣದ ಕನಸನ್ನು ಹೊಂದ್ದಿದ್ದು, ಈ ನಿಟ್ಟಿನಲ್ಲಿ 2022 ಇಸವಿ ಹೊತ್ತಿಗೆ ಈ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಪ್ರತಿಯೊಬ್ಬ ವಿದ್ಯಾವಂತರೂ ಉದ್ಯೋಗವನ್ನು ಪಡೆಯಲೇಬೇಕು. ಇದರೊಂದಿಗೆ ವಿವಿಧ ಯೋಜನೆಗಳ ಮೂಲಕ ಕೇಂದ್ರ ಸರಕಾರ ಸ್ವಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರ ಪ್ರಯೋಜನವನ್ನು ಎ¯್ಲರೂ ಪಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ವೈದ್ಯಕಿಯ ಪ್ರಕೋಷ್ಠದ ಜಿಲ್ಲಾಧ್ಯಕ್ಷ ಡಾ. ಬಿ.ಸಿ. ನವೀÀನ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉದ್ಯೋಗದ ವಿಚಾರದಲ್ಲಿ ಮಾಹಿತಿಯ ಕೊರತೆಯಿಂದ ಅವಕಾಶ ವಂಚಿತರಾಗುತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ 104 ಪಂಚಾಯಿತಿ ವ್ಯಾಪ್ತಿಯ 281 ಗ್ರಾಮಗಳಲ್ಲಿ ಉದ್ಯೋಗ ಮಾಹಿತಿಯನ್ನು ನೀಡುವದರೊಂದಿಗೆ ಆತ್ಮವಿಶ್ವಾಸದ ಕೊರತೆಯಿರುವ ವಿದ್ಯಾರ್ಥಿಗಳಿಗೆ ಧ್ಯೆರ್ಯ ಹೇಳುವ ಕೆಲಸ ಮಾಡಲಾಗುವದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಮಂಜುಳ, ಪಕ್ಷದ ವಕ್ತಾರ ಎಂ.ಬಿ. ಅಭಿಮನ್ಯು ಕುಮಾರ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಕಿಬ್ಬೆಟ್ಟ ಮಧು, ಕ್ಷೇತ್ರ ಸಮಿತಿ ಅಧ್ಯಕ್ಷ ಕುಮಾರಪ್ಪ ಉಪಸ್ಥಿತರಿದ್ದರು.ಸಂಪಾಜೆಯಲ್ಲಿ ಜೆ.ಡಿ.ಎಸ್. ಸಮಾವೇಶ
ಸಂಪಾಜೆ: ರಾಜ್ಯದಲ್ಲಿ ಜಾತ್ಯತೀತ ಜನತಾದಳದ ಪಕ್ಷಕ್ಕೆ ಈ ಬಾರಿ ಮತದಾರ ಮನ್ನಣೆ ನೀಡಲಿದ್ದು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ಸತೀಶ್ ಜೋಯಪ್ಪ ಅಭಿಪ್ರಾಯಪಟ್ಟರು.
ಸಂಪಾಜೆ ಹೋಬಳಿಯ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ. ಚೆಂಬು ಗ್ರಾಮದ ಸಮುದಾಯ ಭವನದಲ್ಲಿ ಜೆಡಿಎಸ್‍ನ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಸರ್ಕಾರ ಬದಲಾವಣೆಯಾಗಲಿದ್ದು, ರೈತರ ಸಮಸ್ಯೆಯನ್ನು ಆಲಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆಂದು ಆಶಾಭಾವನೆ ವ್ಯಕ್ತಪಡಿಸಿದರು.
ತಾ. 15ರಂದು ಸಂಪಾಜೆಯಲ್ಲಿ ಹೋಬಳಿ ಮಟ್ಟದ ಸಮಾವೇಶ ನಡೆಸುವ ಮೂಲಕ ಕುಮಾರ ಸ್ವಾಮಿ ಸರ್ಕಾರದಲ್ಲಿ ಮಾಡಿದ ಉತ್ತಮ ಸಾಧನೆಗಳನ್ನು ಜನತೆಯ ಮುಂದೆ ಇಡುವ ಪ್ರಯತ್ನ ಮಾಡಲಾಗುವದು ಎಂದರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆಡಿಎಸ್‍ನ ಜಿಲ್ಲಾ ಮುಖಂಡ ಆದಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಜೆಡಿಎಸ್ ಪಕ್ಷ ಈ ಬಾರಿ ಕಾರ್ಯಕರ್ತನಿಗೆ ಟಿಕೆಟ್ ನೀಡುವ ಮೂಲಕ ಕ್ಷೇತ್ರದಲ್ಲಿ ಪಕ್ಷ ಖಾತೆ ತೆರೆಯಲು ಅವಕಾಶ ಕಲ್ಪಿಸಿದೆ. ಈಗಾಗಲೇ ಕ್ಷೇತ್ರದ ಉದ್ದಗಲಕ್ಕೂ ಮತಗಟ್ಟೆ ಸಮಿತಿಗಳನ್ನು ರಚಿಸಲಾಗಿದೆ. ಬಡಜನತೆಯ ಕಷ್ಟ ಕಾರ್ಪಣ್ಯಗಳಿಗೆ ಸಾಧ್ಯವಾದಷ್ಟು ಸ್ಪಂದನೆ ನೀಡಿದ್ದೇವೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಣತಲೆ ವಿಶ್ವನಾಥ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗೆ ಮತ ನೀಡಿದ ಮತದಾರ ಈ ಬಾರಿ ಬದಲಾವಣೆ ಬಯಸಿರುವದು ಎಲ್ಲೆಡೆ ಕಂಡು ಬರುತ್ತಿದೆ. ಈ ಮತವನ್ನು ಜೆಡಿಎಸ್ ಪಕ್ಷಕ್ಕೆ ವರ್ಗಾಯಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದರು
ಕಾರ್ಯಕ್ರಮದಲ್ಲಿ ಜೆಡಿಎಸ್‍ನ ಮುಖಂಡರಾದ ಬಿ.ಎಂ. ಸೋಮಣ್ಣ, ಚನ್ನಕೇಶವ, ಆನಂದ್ ಮುಂತಾದವರು ಹಾಜರಿದ್ದರು.
ವರ್ಗೀಕರಣ ಯಾತ್ರೆ
ಮಡಿಕೇರಿ: ಬಿಜೆಪಿಯ ಯಾತ್ರೆ ಜನ ಸುರಕ್ಷಾ ಯಾತ್ರೆಯಲ್ಲ, ಬದಲಿಗೆ ಕೊಲೆಗಳ ವರ್ಗೀಕರಣದ ಯಾತ್ರೆ ಎಂದು ಕೊಡಗು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿ, ಜನರ ದಿಕ್ಕು ತಪ್ಪಿಸಲು ಯಾತ್ರೆಯ ಕುತಂತ್ರ ಹೆಣೆದಿದೆ ಎಂದು ಟೀಕಿಸಿದ್ದಾರೆ. ಹತ್ಯೆ ಮಾಡುವದು ಮಹಾಅಪರಾಧವಾಗಿದ್ದು, ಆರೋಪಿಗಳಿಗೆ ಕಾನೂನಿನಡಿ ಶಿಕ್ಷೆಯಾಗಬೇಕು. ಆದರೆ ಬಿಜೆಪಿ ಕೊಲೆಗಳನ್ನು ಕೂಡ ಜಾತಿಯಾಧಾರಿತವಾಗಿ ವರ್ಗೀಕರಣ, ಮಾಡುತ್ತಿದ್ದು, ಇದನ್ನು ಖಂಡಿಸುವದಾಗಿ ಹೇಳಿದರು.ಅಧ್ಯಕ್ಷರ ರಾಜೀನಾಮೆ ಕೇಳಲು ನೈತಿಕ ಹಕ್ಕಿಲ್ಲ: ಬಿಜೆಪಿ
ವೀರಾಜಪೇಟೆ: ಭಾರತೀಯ ಜನತಾ ಪಾರ್ಟಿಯ ಆಡಳಿತದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಎಲ್ಲ ಸದಸ್ಯರುಗಳ ವಿಶ್ವಾಸವನ್ನು ಗಳಿಸಿಕೊಂಡು ಮುನ್ನಡೆಯುತ್ತಿದೆಯಾದರೂ ಈಗಿನ ಅಧ್ಯಕ್ಷರ ರಾಜೀನಾಮೆ ಕೇಳಲು ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಪಕ್ಷದವರಿಗೆ ನೈತಿಕ ಹಕ್ಕಿಲ್ಲ. ಇದು ಕೇವಲ ಚುನಾವಣೆ ಗಿಮಿಕ್ ಎಂದು ಬಿಜೆಪಿ ತಾಲೂಕು ವಕ್ತಾರ ಟಿ.ಪಿ. ಕೃಷ್ಣ ಹೇಳಿದರು.
ಬಿ.ಜೆ.ಪಿ. ನಗರ ಸಮಿತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ನಗರ ಸಮಿತಿ ಅಧ್ಯಕ್ಷರು ಪಕ್ಷವನ್ನು ರಾತ್ರಿ ಬೆಳಗಾದರೆ ಬದಲಾಯಿಸುತ್ತಿದ್ದು, ಇವರಿಗೆ ಸ್ಥಿರವಾದ ಪಕ್ಷವಿಲ್ಲ. ಇತ್ತೀಚೆಗೆ ಕರೆದ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ತಲಾ ಒಬ್ಬೊಬ್ಬ ಸದಸ್ಯರಿದ್ದಿದ್ದರೆ ಕೋರಂ ಆಗಿ ಸಭೆ ನಡೆಯುತಿತ್ತು. ಇಲ್ಲಿ ಬಿಜೆಪಿಯ 9 ಮಂದಿ ಗೈರು ಹಾಜರಿಯ ಪ್ರಶ್ನೆ ಉದ್ಭವಿಸುವದಿಲ್ಲ. ಇದನ್ನು ಅಧ್ಯಕ್ಷರು ನಿರೀಕ್ಷಿಸದ ಕಾರಣ ಸಭೆಗೆ ಕೋರಂ ಕೊರತೆ ಉಂಟಾಗಿ ಮುಂದೂಡಬೇಕಾಯಿತು. ಇದನ್ನು ಅಸ್ತ್ರವಾಗಿಟ್ಟುಕೊಂಡು ಅಧ್ಯಕ್ಷರು ಹಾಗೂ ಪಟ್ಟಣ ಪಂಚಾಯಿತಿ ವಿರುದ್ಧ ಆರೋಪ ಮಾಡುವದು, ರಾಜೀನಾಮೆ ಕೇಳುವದು, ಎರಡು ವಿರೋಧ ಪಕ್ಷಗಳ ಅವಿವೇಕತನವಾಗಿದೆ. ಎರಡು ಪಕ್ಷಗಳು ಪಟ್ಟಣ ಪಂಚಾಯಿತಿ ವಿರುದ್ಧ ಮಾಡಿರುವ ಆರೋಪಕ್ಕೆ ಯಾವದೇ ಹುರುಳಿಲ್ಲ ಎಂದರು.
ಪಕ್ಷದ ನಗರ ಸಮಿತಿಯ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಪಟ್ಟಣ ಪಂಚಾಯಿತಿಗೆ ಬಂದ ಅನುದಾನ ಈಗಿನ ಕಾಂಗ್ರೆಸ್ ಸರಕಾರದಿಂದ ಶೇ. 20 ರಷ್ಟು ಬಂದಿಲ್ಲ. ಕಾಂಗ್ರೆಸ್ ಪಕ್ಷದ ಸದಸ್ಯರು ಸರಕಾರದ ಅನುದಾನ ತರಿಸಲು ವಿಫಲರಾಗಿದ್ದಾರೆ ಎಂದು ದೂರಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಟಿ.ಜೆ. ದಿವಾಕರ್ ಶೆಟ್ಟಿ ಮಾತನಾಡಿ, ವೀರಾಜಪೇಟೆ ಪಟ್ಟಣದಲ್ಲಿ ಈ ಹಿಂದೆಯೇ ಭೂ ಪರಿವರ್ತನೆಯಾಗಿದ್ದರೂ ಈಗಿನ ಸರಕಾರದ ಅಧೀನ ಕಾರ್ಯದರ್ಶಿಗಳು ಪಟ್ಟಣದಲ್ಲಿರುವ ಮನೆ ದಳವನ್ನು ಮರು ಭೂಪರಿವರ್ತನೆ ಮಾಡಿದರೆ ಮಾತ್ರ ಟೌನ್ ಪ್ಲಾನಿಂಗ್ ಕಟ್ಟಡ ಕಟ್ಟಲು ಅನುಮತಿ ನೀಡುವಂತೆ ಸುತ್ತೋಲೆ ಹೊರಡಿಸಿರುವುದು ಬಡವರು, ಕೂಲಿ ಕಾರ್ಮಿಕರು, ಕಸಬುದಾರರು ಹಾಗೂ ಕಟ್ಟಡದ ಮಾಲೀಕರಿಗೆ ತೊಂದರೆ ಉಂಟಾಗಿದೆ. ಇದರಿಂದ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸುಮಾರು 150 ರಿಂದ 200 ಅರ್ಜಿಗಳು ಕಟ್ಟಡದ ಅನುಮತಿಗಾಗಿ ಕಾಯುತ್ತಿವೆ. ಸರಕಾರ ತಕ್ಷಣ ಸುತ್ತೋಲೆಯನ್ನು ಹಿಂದಕ್ಕೆ ಪಡೆಯದಿದ್ದರೆ ಸರಕಾರದ ವಿರುದ್ಧ ಹೋರಾಟ ನಡೆಸಬೇಕಾದೀತು. ಹಳೆ ಮನೆಗಳನ್ನು ಕೆಡವಿ ಹೊಸ ಮನೆ ಕಟ್ಟಲು ಮನೆ ದಳದ ಮಾಲೀಕರು ಅನುಮತಿಗಾಗಿ ಒಂಭತ್ತು ತಿಂಗಳುಗಳಿಂದ ಕಾಯುತ್ತಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್.ಕೆ. ಯತಿರಾಜು, ಕಾರ್ಯದರ್ಶಿ ಯೋಗೀಶ್ ನಾಯ್ಡು ಉಪಸ್ಥಿತರಿದ್ದರು.
ಜೆಡಿಎಸ್ ಕಾರ್ಯಕರ್ತರ ಸಮಾವೇಶ
ಆಲೂರು-ಸಿದ್ದಾಪುರ: ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತಿರುವ ಪಕ್ಷಗಳು ಎಂದು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್�?