ಶನಿವಾರಸಂತೆ, ಮಾ. 11: ಸಮೀಪದ ಗುಡುಗಳಲೆಯ ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಹಾಗೂ ಜಮಾಅತ್ತಿನ ವತಿಯಿಂದ ಪವಾಡ ಪುರುಷ ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹಿ ಹೆಸರಿನ ಉರೂಸ್ ಸಮಾರಂಭ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5ರ ತನಕ ವಿಜೃಂಭಣೆಯಿಂದ ನೆರವೇರಿತು.
ಉರೂಸ್ ಪ್ರಯುಕ್ತ ಜುಮಾ ಮಸೀದಿ ಪಕ್ಕದಲ್ಲಿ ಇರುವ ಪವಾಡ ಪುರುಷ ಹಝ್ರತ್ ಫಖೀರ್ ಷಾಹ್ ವಲಿಯುಲ್ಲಾಹಿ ಅವರ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸುತ್ತ ನಿಂತ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಹರಕೆ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಸೀದಿ ಖತೀಬ ಮುಹಮ್ಮದ್ ಸುಹೈಬ್ ಫೈಝಿ ಅವರ ನೇತೃತ್ವದಲ್ಲಿ ನಡೆದ ಮೌಲಿದ್ ಪಾರಾಯಣ ಕಾರ್ಯಕ್ರಮದಲ್ಲಿ ಪ್ರವಾದಿ ಪ್ರಕೀರ್ತನೆ ಹಾಡಲಾಯಿತು. ಮದ್ರಸ ವಿದ್ಯಾರ್ತಿಗಳು ಧಪ್ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.
ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಬದ್ರಿಯಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಹಸೈನಾರ್ ಉಸ್ತಾದ್ ಮಾತನಾಡಿ, ಮಾನವರು ಆತ್ಮೀಯವಾದ ಬದುಕನ್ನು ನಡೆಸುವದರಿಂದ ನೆಮ್ಮದಿ, ಶಾಂತಿ, ಸಮಾಧಾನದ ಜೀವನವನ್ನು ಕಂಡುಕೊಳ್ಳಬಹುದು ಎಂಬದನ್ನು ಉರೂಸ್ ಧಾರ್ಮಿಕ ಸಭೆಗಳು ತಿಳಿಸುತ್ತವೆ ಎಂದರು.
ಆಡಳಿತ ಮಂಡಳಿ ಉಪಾಧ್ಯಕ್ಷರಾದ ಸಿ.ಎಂ. ಅಬ್ದುಲ್ಲಾ, ಶೇಖಬ್ ಹಾಜಿ, ಇಸ್ಮಾಯಿಲ್ ಫೈಝಿ, ಅಬ್ದುಲ್ ರಜಾಕ್ ಫೈಝಿ, ಶಮೀರ್ ಫೈಝಿ, ಹಸೈನಾರ್ ಫೈಝಿ, ಸಿ.ಎ. ಹಮೀದ್, ಹಸೈನಾರ್ ಕಾಜೂರ್, ಕಾರ್ಯದರ್ಶಿ ಕೆ.ಎಂ. ಮುಸ್ತಾಫ್, ಸದಸ್ಯರಾದ ಎಸ್.ಎ. ಖಾದರ್, ಎಸ್.ಎ. ಹಮೀದ್, ಸಿ.ಬಿ. ಅಬ್ಬಾಸ್, ಬಿ.ಆರ್. ಹಮೀದ್ ಹಾಗೂ ಚೆರಿಯಾಕ ಹಾಜಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಮಂದಿ ಭಕ್ತಾದಿಗಳು ಉರೂಸ್ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ನಡೆಯಿತು.