ಮಡಿಕೇರಿ, ಮಾ. 11 : ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರು ಸೇರಿದಂತೆ ಬಡ ಜನತೆಗೆ ಜಾರಿಗೊಳಿಸಿರುವ ಹಲವಷ್ಟು ಯೋಜನೆಗಳು ಮತ್ತು ಸಹಾಯಧನ ಮಧ್ಯವರ್ತಿಗಳ ಪಾಲಾಗುವದ ರೊಂದಿಗೆ ಫಲಾನುಭವಿಗಳು ವಂಚನೆಗೆ ಒಳಗಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ತಾ. 9 ರಂದು ಜರುಗಿದ ಮಡಿಕೇರಿ ತಾ.ಪಂ. ಸಭೆಯಲ್ಲಿ ಕೇಳಿ ಬಂದಿತು. ಬಡ ಕುಟುಂಬಗಳ ಪಡಿತರ ಚೀಟಿ, ರೈತರಿಗೆ ಕೃಷಿ ಉಪಕರಣಗಳ ಸಹಾಯಧನ, ಮಾತೃಪೂರ್ಣ ಯೋಜನೆ, ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ಇತ್ಯಾದಿ ಪ್ರತಿಯೊಂದು ಯೋಜನೆ ಅರ್ಹರಿಗೆ ಸಮರ್ಪಕವಾಗಿ ಲಭಿಸುತ್ತಿಲ್ಲ ಎಂದು ಸದಸ್ಯರುಗಳು ಆಕ್ಷೇಪಿಸಿದರು. ಸ್ವತಃ ತಾ.ಪಂ. ಅಧ್ಯಕ್ಷರೇ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಬಡವರ ಮಕ್ಕಳಿಗೆ ಸರಕಾರಿ ಮೀಸಲಾತಿಯಡಿ ಕಲಿಕೆಗೆ ಅವಕಾಶ ಲಭಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಜರುಗಿದ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಕೊಡಪಾಲು ಗಣಪತಿ, ಶ್ರೀಧರ್ ಮೊದಲಾದವರು ಪರಿಶಿಷ್ಟ ಜಾತಿ-ವರ್ಗದವರಿಗೆ ಕೂಡ ಯೋಜನೆಗಳು ತಲಪುತ್ತಿಲ್ಲವೆಂದು ಬೊಟ್ಟು ಮಾಡಿದರು. ಸ್ವತಃ ಅಧ್ಯಕ್ಷರು, ಉಪಾಧ್ಯಕ್ಷ, ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಕೂಡ ಈ ಬಗ್ಗೆ ದನಿಗೂಡಿಸಿದರು.

ಮಧ್ಯವರ್ತಿಗಳ ಪಾಲು : ಸರಕಾರಗಳಿಂದ ರೈತರಿಗೆ ಶೇ. 50 ರಿಂದ ಶೇ. 90 ರಷ್ಟು ಸಹಾಯಧನ ದೊಂದಿಗೆ ಕೃಷಿ ಉಪಕರಣಗಳು ಲಭ್ಯವಿದ್ದರೂ, ಮಧ್ಯವರ್ತಿಗಳು ಕೆಲ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಳಪೆ ಗುಣಮಟ್ಟದ ಹಾಗೂ ಅಧಿಕೃತ ಕಂಪೆನಿಗಳಿಗೆ ಒಳಪಡದ ಉಪಕರಣ ನೀಡಿ ಹಣ ದೋಚುವದರೊಂದಿಗೆ ಫಲಾನುಭವಿಗಳನ್ನು ವಂಚಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದರು.

ರೈತರು ಹೊಂದಿಕೊಳ್ಳುವ ನೀರಾವರಿ ಪೈಪ್‍ಗಳ ಸಹಿತ ಕಳಪೆ ವಸ್ತುಗಳತ್ತ ಬೊಟ್ಟು ಮಾಡಿದ ಸದಸ್ಯರು, ಬಡ ವಿದ್ಯಾರ್ಥಿಗಳ ವಸತಿ ನಿಲಯಗಳ ಯಾವ ವಸ್ತುಗಳು ಕೂಡ ಒಂದು ವರ್ಷವೂ ಬಾಳಿಕೆ ಬರುತ್ತಿಲ್ಲವೆಂದು ಟೀಕಿಸಿದರು. ಅಂಗನವಾಡಿ,

(ಮೊದಲ ಪುಟದಿಂದ) ವಸತಿ ನಿಲಯಗಳ ಆಹಾರ ಪದಾರ್ಥ ಕೂಡ ಹುಳ ಹುಪ್ಪಟೆಗಳಿಂದ ಗೋಚರಿಸುತ್ತಿರು ವದಾಗಿ ಅಧ್ಯಕ್ಷರೇ ಅಧಿಕಾರಿಗಳ ಕಿವಿ ಹಿಂಡಿದರು.

ಇನ್ನೂ ಮಾತೃಪೂರ್ಣ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸರಕಾರ ಒತ್ತಡ ಹೇರುತ್ತಿದ್ದರೂ, ಯಾರೊಬ್ಬರು ಈ ಸೌಲಭ್ಯ ಪಡೆಯದಿರುವ ಕಾರಣ ನಿರರ್ಥಕಗೊಂಡಿದೆ ಎಂದು ನಾಗೇಶ್ ಕುಂದಲ್ಪಾಡಿ ಬಹಿರಂಗಗೊಳಿಸಿದರೆ, ಆ ದಿಸೆಯಲ್ಲಿ ಪೌಷ್ಠಿಕ ಆಹಾರ ಇತ್ಯಾದಿ ಸರಬರಾಜುಗೊಳಿಸುತ್ತಿಲ್ಲ ವೆಂದೂ, ಯಾವ ಫಲಾನುಭವಿಗಳು ಪಡೆಯಲು ಮುಂದೆ ಬಂದಿಲ್ಲವೆಂದು ಸಂಬಂಧಿಸಿದ ಅಧಿಕಾರಿ ಉತ್ತರಿಸಿದರು.

ಬಡತನರೇಖೆ ಗೊಂದಲ : ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಂಪುಟ ಸಚಿವರು ನೀಡುತ್ತಿರುವ ವಸತಿ ಯೋಜನೆ ಸೇರಿದಂತೆ ಪಡಿತರ ಚೀಟಿ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಆರ್ಥಿಕವಾಗಿ ಹೊಂದಿರುವ

ಆದಾಯ ದೃಢೀಕರಣ ಸಾಕಷ್ಟು ಗೊಂದಲ ಸೃಷ್ಟಿಸಿದೆ ಎಂದು ಸದಸ್ಯರು ಆರೋಪಿಸಿದಾಗ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೀವನ್‍ಕುಮಾರ್ ಸಹಿತ ಯಾರೂ ಉತ್ತರಿಸಲು ಪರಿತಪಿಸತೊಡಗಿದ್ದು, ಕಂಡು ಬಂತು.

ಬಡತನ ರೇಖೆಯಡಿ ಮನೆ ಪಡೆಯಲು ವಸತಿ ಯೋಜನೆ ಫಲಾನುಭವಿಗಳಿಗೆ ರೂ. 32 ಸಾವಿರ ಮೊತ್ತದ ದೃಢೀಕರಣ ಸಲ್ಲಿಸಬೇಕಿದ್ದು, ಅದೇ ಪಡಿತರ ಚೀಟಿಗೆ ರೂ. 1.20 ಲಕ್ಷದ ಆದಾಯ ಪರಿಮಿತಿ ನಿಗಧಿಗೊಳಿಸಲಾಗಿದೆ. ಈ ಗೊಂದಲ ದಿಂದ ನೈಜ ಫಲಾನುಭವಿಗಳಿಗೆ ಸವಲತ್ತು ಲಭಿಸದೆ ಆಸ್ತಿ, ವಾಹನ ಇತ್ಯಾದಿ ಹೊಂದಿರುವವರು ಬಿಪಿಎಲ್ ಪಡಿತರ ಪಡೆಯುವಂತಾಗಿದೆ ಎಂಬ ಆರೋಪ ಕೇಳಿ ಬಂತು.