ಗೋಣಿಕೊಪ್ಪಲು, ಮಾ.11 : ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ಉಪಾಧ್ಯಕ್ಷೆ ಸ್ಥಾನ ವಹಿಸಿಕೊಂಡ ನಂತರ ಜಿಲ್ಲೆಗೆ ವಿವಿಧ ಯೋಜನೆಯ ಮೂಲಕ ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದು ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು.

ಇಲ್ಲಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 480 ಗ್ಯಾಸ್ ಕಿಟ್‍ಗಳನ್ನು ನಿಗಮದ ವತಿಯಿಂದ ಜಿಲ್ಲೆಯಲ್ಲಿ ನೀಡಲಾಗಿದ್ದು, ಇದರಿಂದ ಮಹಿಳೆಯರಿಗೆ ಕಷ್ಟ ದೂರವಾಗಿದೆ. ಇದರ 2ನೇ ಹಂತವಾಗಿ ಮಾರ್ಚ್ 14 ರಂದು ನಾಪೋಕ್ಲು ವಲಯದ ಚೇರಂಬಾಣೆ ಗ್ರಾಮದ 220 ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್, ಸ್ಟೌವ್, ರೆಗ್ಯುಲೇಟರ್, ಲೈಟರ್‍ಗಳನ್ನು ಅಲ್ಲಿನ ಕೊಡವ ಸಮಾಜದಲ್ಲಿ ವಿತರಿಸಲಾಗುತ್ತಿದ್ದು, “ಹೊಗೆ ಮುಕ್ತ ಕೊಡಗು, ಸೌದೆ ರಹಿತ ಅಡುಗೆ” ಎಂಬ ಘೋಷವಾಕ್ಯದಲ್ಲಿ ಯೋಜನೆ ರೂಪುಗೊಂಡಿದೆ. ಪೊನ್ನಂಪೇಟೆ, ವೀರಾಜಪೇಟೆ ವಲಯಗಳ ಅಡುಗೆ ಅನಿಲ ರಹಿತ ಕುಟುಂಬಗಳಿಗೆ ವಿತರಿಸಲಾಗುವದು.

‘ಪದ್ಮಿನಿ ನಡಿಗೆ ಹಾಡಿ ಕಡೆಗೆ’ ಎಂಬ ಕಾರ್ಯಕ್ರಮದಡಿ ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ದೆಯ್ಯದಡ್ಲು ಹಾಡಿಗೆ ಭೇಟಿ ನೀಡಿ ವಾಸ್ತವ್ಯ ಹೂಡಿ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದು ಅದು ಕೂಡ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದ್ದು. ಸರ್ಕಾರದ ವಿವಿಧ ಇಲಾಖೆಗಳಿಂದ ಹಾಡಿ ಅಭಿವೃದ್ದಿಗೊಳ್ಳುತ್ತಿದೆ. ರಸ್ತೆ, ವಿದ್ಯುತ್, ಕುಡಿಯುವ ನೀರು ಒದಗಿಸುವ ಕೆಲಸ ದೆಯ್ಯದಡ್ಲು ಹಾಡಿಯಲ್ಲಿ ಆಗಿದೆ ಎಂದರು.

ಬಿ.ಶೆಟ್ಟಿಗೇರಿ ವ್ಯಾಪ್ತಿಯ ವಿ. ಬಾಡಗ ಗ್ರಾಮದಲ್ಲಿ ಒತ್ತುವರಿ ಗೊಂಡಿದ್ದ 10 ಎಕ್ರೆ ಅರಣ್ಯ ಪ್ರದೇಶವನ್ನು ಇದೀಗ ಸರ್ಕಾರದ ಸುಪರ್ದಿಗೆ ಒಳಪಡಿಸಲಾಗಿದ್ದು. ಇಲ್ಲಿ ನರ್ಸರಿ ಸ್ಥಾಪಿಸಲಾಗುತ್ತದೆ ಇದರಿಂದ ಸ್ಥಳೀಯ ಕೃಷಿಕರಿಗೆ ನೆರವಾಗುತ್ತದೆ ಎಂದರು. ಗೋಷ್ಠಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಕಡೇಮಾಡ ಕುಸುಮಾ ಜೋಯಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಉಪಾಧ್ಯಕ್ಷ ಶರ್ಫುದ್ದೀನ್ ಇದ್ದರು.