ಕುಶಾಲನಗರ, ಮಾ 12: ಕುಶಾಲನಗರ ಮೂಲದ ವ್ಯಕ್ತಿಯೊಬ್ಬರು ಪಿರಿಯಾಪಟ್ಟಣ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಕುಶಾಲನಗರ ನಿವಾಸಿ ಆಂಡ್ರ್ಯೂಸನ್ (ಬಾಬು-45) ಮೃತ ವ್ಯಕ್ತಿ. ಇವರು ತನ್ನ ಸ್ನೇಹಿತ ವಿನ್ಸೆಂಟ್ ಎಂಬವರೊಂದಿಗೆ ಬೈಕ್‍ನಲ್ಲಿ ಕೇರಳಕ್ಕೆ ತೆರಳಿ ಕುಶಾಲನಗರಕ್ಕೆ ಹಿಂತಿರುಗುತ್ತಿದ್ದ ಸಂದರ್ಭ ರಾತ್ರಿ 8 ಗಂಟೆ ವೇಳೆಗೆ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯ ಗೌಡ ಸಮಾಜ ಬಳಿ ಟ್ರಾಕ್ಟರ್‍ಗೆ ಡಿಕ್ಕಿಯಾಗಿದೆ. ಅಪಘಾತದಿಂದ ಇಬ್ಬರು ಸವಾರರಿಗೆ ತೀವ್ರ ಗಾಯ ಉಂಟಾಗಿದೆ. ಪಿರಿಯಾಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ಮೃತನ ದೇಹದ ಯಾವದೇ ಭಾಗಕ್ಕೆ ಗಾಯವಾಗದೆ ಇದ್ದರೂ ಕಾಲಿಗೆ ಉಂಟಾದ ಗಾಯದಿಂದ ತೀವ್ರ ರಕ್ತಸ್ರಾವವಾದ ಕಾರಣ ಮೃತಪಟ್ಟಿದ್ದಾರೆ ಎಂದು ಮೃತನ ಸಹೋದರ ಪ್ಯಾಟ್ರಿಕ್ ತಿಳಿಸಿದ್ದಾರೆ. ಗಾಯಾಳು ವಿನ್ಸೆಂಟ್ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.