ಮಡಿಕೇರಿ, ಮಾ. 12: ಕೊಡಗು ಜಿಲ್ಲೆಯ ವಿವಿಧ ಹಾಡಿಗಳು ಸೇರಿದಂತೆ ತೋಟ ಮಾಲೀಕರ ಲೈನ್ಮನೆಗಳಲ್ಲಿ ವಾಸವಿರುವ ಕಾರ್ಮಿಕ ಕುಟುಂಬಗಳ ಆದಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹಿಸುವದರೊಂದಿಗೆ 15 ದಿನಗಳಲ್ಲಿ ಜಿಲ್ಲಾಡಳಿತ ಸೂಕ್ತ ಭರವಸೆ ನೀಡದಿದ್ದರೆ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಿರುವದಾಗಿ ಕರ್ನಾಟಕ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ ಗಡುವು ನೀಡಿದೆ.ನಗರದಲ್ಲಿ ಇಂದು ಪ್ರತಿಭಟನಾ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶನ ನಡೆಸಿದ ಆದಿವಾಸಿಗಳು, ದಿಡ್ಡಳ್ಳಿಯ ಹೋರಾಟ ವೇಳೆ ಎಲ್ಲಾ ಆದಿವಾಸಿಗಳಿಗೆ ವಸತಿಯೊಂದಿಗೆ ಮೂಲಭೂತ ಸೌಕರ್ಯದ ಭರವಸೆ ನೀಡಿದ್ದರೂ ಇದುವರೆಗೆ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.