ಸೋಮವಾರಪೇಟೆ, ಮಾ. 12: ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ಸ.ನಂ.1/1ರಲ್ಲಿ ಕಳೆದ ಅನೇಕ ದಶಕಗಳಿಂದ ಮಾನವ ಶಕ್ತಿ ಬಳಸಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಭೋವಿ ಜನಾಂಗಕ್ಕೆ ಇದೀಗ ಅರಣ್ಯ ಇಲಾಖೆಯಿಂದ ಸಂಕಷ್ಟ ಎದುರಾಗಿದ್ದು, ಕಲ್ಲು ಗಣಿಗಾರಿಕೆಗೆ ಅವಕಾಶ ನೀಡುವಂತೆ ಆಗ್ರಹಿಸಿ ತಾ. 13ರಂದು (ಇಂದು) ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವದು ಎಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಅಧ್ಯಕ್ಷ ಸುಜಿತ್ ತಿಳಿಸಿದ್ದಾರೆ.

ಅರಣ್ಯ ಇಲಾಖೆ ತಡೆಯೊಡ್ಡಿದ್ದರಿಂದ ಭೋವಿ ಜನಾಂಗ ಕೆಲಸವಿಲ್ಲದೆ ಬೀದಿಪಾಲಾಗಿದೆ. ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಭೋವಿ ಜನಾಂಗದವರಿಗೆ ಜೀವನದ ಅವಶ್ಯಕತೆಗಾಗಿ ಯಾವದೇ ಸ್ಫೋಟಕ ಬಳಸದೇ ಮಾನವ ಶಕ್ತಿಯಿಂದ ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಆದೇಶ ನೀಡಿದ್ದಾರೆ. ಆದರೆ ಈ ಆದೇಶವನ್ನು ಅರಣ್ಯ ಇಲಾಖೆ ಗಾಳಿಗೆ ತೂರಿದೆ ಎಂದು ಆರೋಪಿಸಿದರು.

ಕರವೇ ಬೆಂಬಲ: ಭೋವಿ ಜನಾಂಗದ ಬದುಕುವ ಹಕ್ಕನ್ನು ಕಸಿದುಕೊಂಡಿರುವದು ಖಂಡನೀಯ. ಅರಣ್ಯದ ಮರ ಕಡಿಯಲು ಭೋವಿ ಜನಾಂಗದವರು ಅನುಮತಿ ಕೇಳುತ್ತಿಲ್ಲ;ಬದಲಿಗೆ ಕಲ್ಲು ಒಡೆಯಲು ಅವಕಾಶ ಬೇಡುತ್ತಿದ್ದಾರೆ. ಇವರ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಪ್ರತಿಭಟನೆಗೆ ಕರವೇ ಸೋಮವಾರಪೇಟೆ ನಗರ ಘಟಕ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಬಿ.ಎಸ್. ಮಂಜುನಾಥ್ ತಿಳಿಸಿದರು. ಗೋಷ್ಠಿಯಲ್ಲಿ ಭೋವಿ ಯುವ ವೇದಿಕೆ ತಾಲೂಕು ಉಪಾಧ್ಯಕ್ಷ ಎಂ.ಕೆ. ಸುಬ್ರಮಣಿ, ಸದಸ್ಯ ಎಂ. ಮುರುಗನ್ ಉಪಸ್ಥಿತರಿದ್ದರು.