ಮಡಿಕೇರಿ, ಮಾ. 12 : ಧಾರ್ಮಿಕ ಉಲಮಾ ಒಕ್ಕೂಟದ ಅಂಗ ಸಂಸ್ಥೆಗಳಾದ ಕುಶಾಲನಗರದ ಎಸ್. ವೈ.ಎಸ್. ಮತ್ತು ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ತಾ. 15 ರಂದು ಕುಶಾಲನಗರದ ಜಾತ್ರಾ ಮೈದಾನದಲ್ಲಿ ಶಂಶುಲ್ ಉಲಮಾ ವೇದಿಕೆಯಲ್ಲಿ ಧಾರ್ಮಿಕ ಪತಪ್ರಭಾಷಣ ಮತ್ತು ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಎಸ್.ವೈ.ಎಸ್. ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆ ಧಾರ್ಮಿಕ ಪ್ರಜ್ಞೆ ಕೊರತೆಯಿರುವ ಕಾರಣ ಅವರುಗಳು ಹಾದಿ ತಪ್ಪುತ್ತಿದ್ದಾರೆ. ಅವರನ್ನು ಪ್ರಜ್ಞಾವಂತ ಸಮೂಹವನ್ನಾಗಿ ಮಾರ್ಪಡಿಸಲು ಎಲ್ಲಾ ಧರ್ಮಗಳ ವಿಶ್ವಾಸ ಮತ್ತು ಆಚಾರ, ವಿಚಾರಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಹೀಗಾದಲ್ಲಿ ಮಾತ್ರ ಸಮಾಜದಲ್ಲಿ ಶಾಂತಿ ಮೂಡಿಸಿ ಸಹಬಾಳ್ವೆ ನಡೆಸಲು ಸಾಧ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 8 ರಿಂದ 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಉಲಮಾ ಒಕ್ಕೂಟದ ಅಂಗ ಸಂಸ್ಥೆಗಳಾದ ಎಸ್. ವೈ.ಎಸ್. ಮತ್ತು ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಗಳು ವಿಜ್ಞಾನ, ವಿನಯ, ಸೇವೆ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಶಾಖೆಗಳ ಮೂಲಕ ಆಧ್ಯಾತ್ಮಿಕ ಅರಿವಿನ ಬಗ್ಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.

ನಮ್ಮ ಸಮಾಜದಲ್ಲಿ ಇಂದು ಹಲವಾರು ಜಾತಿಗಳು, ಉಪಜಾತಿಗಳು ಇದ್ದು, ಅವುಗಳಲ್ಲಿ ಬಹಳಷ್ಟು ಪಂಗಡಗಳಾಗಿ ವಿಭಜನೆಗೊಂಡಿವೆ. ಪರಸ್ಪರ ಅರ್ಥೈಸಿಕೊಂಡು ಜೀವನ ನಡೆಸಿದರೆ ಮಾತ್ರ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನಮ್ಮ ನಮ್ಮಲ್ಲೇ ಕಂದಕಗಳು ನಿರ್ಮಾಣಗೊಂಡು ಸಾಮರಸ್ಯದ ಬದುಕಿಗೆ ಅಡ್ಡಿಯಾಗುತ್ತದೆ ಎಂದು ಮೊಹಿದ್ದೀನ್ ಅಭಿಪ್ರಾಯಪಟ್ಟರು. ಸಮಸ್ತದ ಜಿಲ್ಲಾಧ್ಯಕ್ಷರು ಹಾಗೂ ಸಹಾಯಕ ಖಾಝಿಗಳಾದ ಎಂ.ಎಂ. ಅಬ್ದುಲ್ಲಾ ಫೈಝಿ ಅವರ ಅಧ್ಯಕ್ಷತೆಯಲ್ಲಿ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಅಸ್ಸಯ್ಯದ್ ಅಲಿ ತಂಞಳ್ ಕುಂಬೋಳ್ ಅವರು ಉದ್ಘಾಟಿಸಲಿದ್ದಾರೆ. ಪ್ರಖ್ಯಾತ ವಾಗ್ಮಿಗಳಾದ ಎ.ಎಂ.ನೌಶಾದ್ ಬಾಖವಿರ ಅವರು “ಹಾದಿ ತಪ್ಪುತ್ತಿರುವ ಯುವ ಪೀಳಿಗೆಯ ಒಳಿತಿನೆಡೆಗೆ ಮಾರ್ಗದರ್ಶನ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಲಮಾ, ಉಮರಾ ನೇತಾರರೂ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ಜಿಲ್ಲಾಧ್ಯಕ್ಷ ಎಂ.ವೈ.ಇಸ್ಮಾಯಿಲ್, ಕಾರ್ಯದರ್ಶಿ ಅಬ್ದುಲ್ ಮಜೀದ್, ಮಹಮ್ಮದ್ ಹನೀಫ್, ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ನಾಸಿರ್ ಧಾರಿಮಿ ಹಾಗೂ ಎಂ.ಎಸ್.ಹುಸೇನ್ ಉಪಸ್ಥಿತರಿದ್ದರು.