ಗೋಣಿಕೊಪ್ಪಲು, ಮಾ. 12 : ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲದೆ ಅನೇಕ ಗ್ರಾಮಗಳು ತತ್ತರಗೊಂಡಿದೆ. ರೈತರು ಕೃಷಿ ಭೂಮಿಗಳತ್ತ ಮುಖ ಮಾಡದೇ ಹಲವು ವರ್ಷಗಳೇ ಉರುಳಿದೆ ಜಿಲ್ಲೆಯಲ್ಲಿ ಪಾಳು ಬಿದ್ದ ಅನೇಕ ಕೆರೆಗಳು ಇನ್ನೂ ಜೀವಂತವಾಗಿದ್ದು ಅದರ ಅಭಿವೃದ್ಧಿ ಕಡೆ ಮಾತ್ರ ಸರ್ಕಾರ ಮುಖ ಮಾಡಿರಲಿಲ್ಲ. ಆದರೆ ಇದೀಗ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗೌರಿಕೆರೆಗೆ ಪುನಶ್ಚೇತನದ ಭಾಗ್ಯ ದೊರಕಿದ್ದು ಕೃಷಿಕರ ಮನದಲ್ಲಿ ಮಂದಹಾಸ ಮೂಡಿದೆ.
ಸಣ್ಣ ನೀರಾವರಿ ಇಲಾಖೆಯ ವತಿಯಿಂದ ತಿತಿಮತಿ ಗ್ರಾ.ಪಂ ವ್ಯಾಪ್ತಿಯ ಮರೂರುವಿನಲ್ಲಿರುವ ಗೌರಿಕೆರೆಯನ್ನು ಪುನಶ್ಚೇತನ ಗೊಳಿಸುತ್ತಿದ್ದು ಇದರ ಮೂಲಕ ಮರೂರುವಿನ ಕಾರೆಕಂಡಿ ಕಾಳಯ್ಯನ ಕೆರೆಯ ಮೂಲಕ ಸುತ್ತಮುತ್ತಲಿನ 50 ಎಕ್ರೆ ಕೃಷಿ ಭೂಮಿಗೆ ಪ್ರಯೋಜನ ವಾಗಲಿದೆ. ಮೈಸೂರು ಮುಖ್ಯರಸ್ತೆಯ ಬದಿಯಲ್ಲಿರುವ ಗೌರಿಕೆರೆಗೆ ಹಲವು ವರ್ಷಗಳ ಇತಿಹಾಸವಿದೆ ಗ್ರಾಮಸ್ಥರು ಕಳೆದ 5 ದಶಕಗಳ ಹಿಂದಿನಿಂದಲೂ ಇಲ್ಲಿಯೇ ಗೌರಿ ಗಣೇಶ ಹಬ್ಬದ ಸಂದರ್ಭ ಮೂರ್ತಿ ವಿಸರ್ಜಿಸಿ ಸಂಭ್ರಮಿಸುತ್ತಿದ್ದರು. ಅದೇ ರೀತಿ ಕೆರೆ ತುಂಬಿ ಹರಿಯುತ್ತಿತ್ತು. ನಂತರ ಸೂಕ್ತ ನಿರ್ವಹಣೆ ಇಲ್ಲದೇ ಕಳೆದ 25 ವರ್ಷ ಗಳಿಂದ ಹೂಳು ತುಂಬಿ ನೀರು ಕೆಳದರ್ಜೆಗೆ ತಲಪಿತ್ತು. ಯೋಗ್ಯವಿಲ್ಲದೆ ಪಾಳುಬಿದ್ದ ಕೆರೆ ಪುನಶ್ಚೇತನ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ ಕಸ, ಕಡ್ಡಿ, ಮಣ್ಣು ತುಂಬಿದ್ದ ಕೆರೆಯಲ್ಲಿ ನೀರು ಹುಕ್ಕುವ ಕಾಲ ಬಂದಿದ್ದು ಇದರಿಂದ ಗ್ರಾಮದ ಜನರಲ್ಲಿ ಸಂತಸ ಮನೆ ಮಾಡಿದೆ.
ಸುಮಾರು 21.12 ಲಕ್ಷ ವೆಚ್ಚದಲ್ಲಿ ಗೌರಿಕೆರೆ ಪುನಶ್ಚೇತನಗೊಳಿಸುತ್ತಿದ್ದು ಇದರೊಂದಿಗೆ ಕಾರೆಕಂಡಿ ಕಾಳಯ್ಯನ ಕೆರೆಯನ್ನೂÉ 15.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಿ ಗೌರಿಕೆರೆಯಿಂದ ಪೈಪ್ ಲೈನ್ ಮೂಲಕ ಕಾಳಯ್ಯನ ಕೆರೆಗೆ ನೀರು ಹರಿಸಲಾಗುವದು. ಸುತ್ತಮುತ್ತ 150 ಕೃಷಿ ಕುಟುಂಬಗಳಿದ್ದು ನೀರಿಗಾಗಿ ಪರದಾಡುತ್ತಿದ್ದ ರೈತರಿಗೆ ಇದು ವರದಾನವಾಗಲಿದೆ. ಮುಕ್ಕಾಲು ಅಡಿಯ ಪೈಪ್ ಬಳಸಿ 400 ಮೀಟರ್ ದೂರ ನೀರು ತಲಪಿಸಲಾಗುವದು. ಈ ಮೂಲಕ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಕೃಷಿಕರಿಗೆ ಮುಕ್ತಿ ದೊರಕಲಿದೆ.
ಪುನಶ್ಚೇತನಕ್ಕೆ ಭೂಮಿಪೂಜೆ : ಕೆರೆ ಪುನಶ್ಚೇತನ ಕಾಮಗಾರಿ ಭೂಮಿಪೂಜೆಯನ್ನು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹಾಗೂ ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ನೆರವೇರಿಸಿದರು.
ಜಿ.ಪಂ ಸದಸ್ಯೆ ಪಂಕಜ, ಗ್ರಾ.ಪಂ ಅಧ್ಯಕ್ಷ ಶಿವಕುಮಾರ್, ಪಿಡಿಒ ಪ್ರಭಾಕರ್, ವಲಯ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್, ವಿಎಸ್‍ಎಸ್Àಎನ್ ಬ್ಯಾಂಕ್ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ, ಟಾಟಾ ಕಾಫಿ ವ್ಯವಸ್ಥಾಪಕ ವಿನಯ್, ಗೋಣಿಕೊಪ್ಪ ಗ್ರಾ.ಪಂ ಸದಸ್ಯರಾದ ಪ್ರಮೋದ್ ಗಣಪತಿ, ಜಮ್ಮಡ ಸೋಮಣ್ಣ, ಸ್ಥಳೀಯರಾದ ಹರೀಶ್ ಪಿಳೈ, ಕಳ್ಳಿಚಂಡ ಅಶ್ವತ್, ಮಂಜು, ನವೀನ್, ಮಾದೇವ್, ಅಫ್ರೋಜ್ ಸೇರಿದಂತೆ ಗ್ರಾಮದ ನಿವಾಸಿಗಳು ಇದ್ದರು.