ಶ್ರೀಮಂಗಲ, ಮಾ. 12: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ವಾಡಿಕೆ ಪ್ರಮಾಣ ಗಣನೀಯ ಕುಸಿತ, ಹೆಚ್ಚಾದ ತಾಪಮಾನ, ನದಿಗಳಲ್ಲಿ ಅವ್ಯಾವಹತ ಮರಳು ಗಣಿಗಾರಿಕೆ, ಭತ್ತದ ಗದ್ದೆಗಳು ಪಾಳುಬಿಟ್ಟು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆ, ಅಭಿವೃದ್ಧಿಯ ಹೆಸರಿನಲ್ಲಿ ಮರ ಹನನದಿಂದ ನದಿಯ ನೀರಿನ ಮಟ್ಟ ಕುಸಿದಿದ್ದು, ಇದರಿಂದ ಅವಧಿ ಪೂರ್ವವೇ ನದಿಗಳು ಹರಿವಿಕೆ ಸ್ಥಗಿತಗೊಳಿಸಿ ಬತ್ತಿ ಬರಡಾಗುತ್ತಿವೆ.
ಲಕ್ಷ್ಮಣ ತೀರ್ಥ ನದಿ ಬತ್ತಿರುವದ ರಿಂದ, ಇತರ ಜಲ ಮೂಲಗಳು ಸಹ ಬತ್ತುತಿವೆ. ಕೆರೆ ಕಟ್ಟೆಗಳು, ಕುಡಿಯುವ ನೀರಿನ ಬಾವಿಗಳು, ತೋಡುಗಳು ಸಹ ಬತ್ತುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ನದಿ ಬತ್ತಿರುವದರಿಂದ ಕೆಲವು ಗುಂಡಿಗಳಲ್ಲಿ ಮಾತ್ರ ನೀರು ನಿಂತಿದ್ದು ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಹಲವೆಡೆ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ನದಿಯ ಜಲಚರಗಳಿಗೂ ಆಶ್ರಯ ಇಲ್ಲದಂತಾದರೆ, ಇನ್ನೊಂದು ಕಡೆ ವನ್ಯ ಪ್ರಾಣಿಗಳು ಇತರ ಜೀವ ಸಂಕುಲಕ್ಕೂ ಆಶ್ರಯವಾಗಿರುವ ಈ ನದಿ ಬತ್ತಿರುವದರಿಂದ ಸಂಕಷ್ಟ ಉಂಟಾಗಿದೆ.
ಬೇಸಿಗೆ ಇನ್ನೂ ಮೂರು ತಿಂಗಳು ಇದ್ದು ಮುಂಗಾರು ಮಳೆ ಆರಂಭವಾಗಿ, ಉತ್ತಮ ಮಳೆಯಾದರೆ ಮಾತ್ರ ನದಿಗಳು ಜೀವ ತುಂಬಿ ಹರಿಯುತ್ತವೆ. ಆದರೆ, ಕಳೆದ ಮೂರು ವರ್ಷದಿಂದ ಕೊಡಗು ಜಿಲ್ಲೆಯಲ್ಲಿ ಅದರಲ್ಲೂ ದ. ಕೊಡಗಿ ನಾದ್ಯಂತ ವಾಡಿಕೆ ಮಳೆ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ.
ಇದರಿಂದ ಕಾವೇರಿಯ ಉಪ ನದಿ ಲಕ್ಷ್ಮಣ ತೀರ್ಥ ಹರಿವಿಕೆ ಸ್ಥಗಿತಗೊಳಿಸಿದ್ದು ಬತ್ತಿ ಬರಡಾಗಿದೆ. ಜಿಲ್ಲೆಯ ಬೆಳೆಗಾರರು ತಮ್ಮ ಜೀವನೋಪಾಯಕ್ಕಾಗಿ ಕಾಫಿ ತೋಟಕ್ಕಾಗಿ ನದಿ ನೀರನ್ನು ಅನಿವಾರ್ಯವಾಗಿ ಬಳಸುತ್ತಾರೆ. ಆದರೆ, ಕಾಫಿ ತೋಟಕ್ಕೆ ನೀರು ಒದಗಿಸಲು ಸಹ ನದಿಗಳಲ್ಲಿ ನೀರು ಲಭ್ಯತೆ ಇಲ್ಲದೆ, ಪರದಾಡುವಂತಹ ಪರಿಸ್ಥಿತಿ ಕಂಡುಬಂದಿದೆ. ಜಿಲ್ಲೆಯಲ್ಲಿ ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿರುವದರಿಂದ ಗದ್ದೆಗಳಲ್ಲಿ ನೀರು ನಿಲ್ಲದೆ, ಅಂತರ್ಜಲ ಮಟ್ಟವು ಕುಸಿದಿದೆ. ಇನ್ನೊಂದು ಕಡೆ ವ್ಯಾಪಕವಾಗಿ ಗದ್ದೆಗಳು ಕೃಷಿಯೇತರ ಚಟುವಟಿಕೆಗೆ ಭೂಪರಿವರ್ತನೆ ಯಾಗುತ್ತಿದ್ದು ನೀರಿನ ಸೆಲೆಗಳು ಬರಡಾಗುತ್ತಿದೆ.
ಭತ್ತದ ಕೃಷಿಯಿಂದ 6 ತಿಂಗಳು ಗದ್ದೆಯಲ್ಲಿ ನೀರು ನಿಲ್ಲುವದರಿಂದ ನೀರು ಗದ್ದೆಯಲ್ಲಿ ಇಂಗಿ ಅಂತರ್ಜಲ ಮಟ್ಟ ಬಹಳಷ್ಟು ಸುಧಾರಣೆಯಾಗುತ್ತದೆ. ಜಿಲ್ಲೆಯಲ್ಲಿ ಹೈಟೆನ್ಷನ್ ವಿದ್ಯುತ್ ಯೋಜನೆ ರೂಪಿತವಾದ ನಂತರ ವಾಡಿಕೆಯ ಮಳೆಯ ಪ್ರಮಾಣ ಕುಸಿದಿದ್ದು, ತಾಪಮಾನವು ಏರಿಕೆಯಾಗುತ್ತಿದೆ. ತಂಪಿನ ನಾಡಾದ ಕೊಡಗಿನಲ್ಲಿ ಇದೀಗ 30 ಡಿಗ್ರಿ ತಾಪಮಾನ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಇದರ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಆತಂಕವಿದೆ.
ಸಾಂಪ್ರದಾಯಿಕ ಭತ್ತದ ಕೃಷಿಗಳು ಪುನರಾರಂಭಿಸಲು ಉತ್ತೇಜನ ನೀಡುವದು, ಕೃಷಿ ಭೂಮಿಗಳನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತಿಸುವದನ್ನು ಕಡ್ಡಾಯವಾಗಿ ನಿಷೇಧಿಸುವದು, ಅಭಿವೃದ್ಧಿಯ ಹೆಸರಿನಲ್ಲಿ ಮರ ಹನನಕ್ಕೆ ತಡೆ ಮಾಡುವದು, ಅಕ್ರಮ ಮರಳುಗಾರಿಕೆ ಹಾಗೂ ಮರ ಕಳ್ಳಸಾಗಣೆಗೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮದಿಂದ ವಾಡಿಕೆಯ ಮುಂಗಾರು ಮಳೆ ಆಗಿ ಕೊಡಗು ಚೇತರಿಸಿಕೊಂಡಾಗ ಮಾತ್ರ ನದಿಗಳಲ್ಲಿ ಜೀವಂತಿಕೆ ಕಾಣಲು ಸಾಧ್ಯ.