ವೀರಾಜಪೇಟೆ, ಮಾ. 12: ‘ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಿಯಾಲದಲ್ಲಿ ನಡೆದ ತÀನ್ನ ಮಗಳು ಅಸ್ಮಾ(24) ಸಾವು ಆತ್ಮಹತ್ಯೆ ಅಲ್ಲ ಅದು ಕೊಲೆ’ ಎಂದು ಮೃತರ ತಂದೆ ಕೊಂಡಂಗೇರಿಯ ಪಿ ಇಬ್ರಾಹಿಂ ಪೋಲಿಸರಿಗೆ ದೂರು ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ ತಾ. 16.10.12 ರಂದು ಚಾಮಿಯಾಲದ ನಸೀರ್ ಎಂಬವರಿಗೆ ಮಗಳು ಅಸ್ಮಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಮಯದಲ್ಲಿ 40ಗ್ರಾಂ ಚಿನ್ನ ಹಾಗೂ ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೂ ಮದುವೆಯಾದ ಸ್ಪಲ್ಪ ದಿನಗಳಲ್ಲಿಯೆ ಅಸ್ಮಾಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಆ ಕುಟುಂಬ ಪೀಡಿಸುತ್ತಿತ್ತು; ಕಳೆದ 8 ತಿಂಗಳಿಂದ ಅಸ್ಮಾ ತನ್ನ ಮನೆಯಲ್ಲಿಯೆ ಇದ್ದಳು. ತ್ರಿವಳಿ ತಲಾಖ್ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದ ಮೇಲೆ ಭಯಗೊಂಡು ಅಸ್ಮಾಳನ್ನು ಗಂಡನ ಮನೆಗೆ ಕರೆದುಕೊಂಡು ಹೋಗಿ ಮನೆ ಕೆಲಸದವರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಕಿರುಕುಳ ಹಾಗೂ ಮಾನಸಿಕ ಹಿಂಸೆಯ ಕುರಿತು ಅಸ್ಮಾ ಆಗಿಂದಾಗ್ಗೆ ಪೋಷಕರೊಂದಿಗೆ ದೂರುತ್ತಿದ್ದಳು; ತಾ.10ರಂದು ಆಕೆಯ ಕೊಲೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ ತಂದೆ, ಕೆಲವರು ಆಕೆಯೇ ಆತ್ಮಹತ್ಯೆ ಮಾಡಿಕೊಂಡಳೆಂದು ಕಥೆ ಕಟ್ಟಿದ್ದಾರೆ ಎಂದರು.

ಅಳಿಯ ನಸೀರ್ ಕೊಂಡಗೇರಿಯ ತಮ್ಮ ಮನೆಗೆ ದೂರವಾಣಿ ಮಾಡಿದ ತಕ್ಷಣ ಮೃತ ದೇಹವನ್ನು ಪರಿಶೀಲಿಸಿದಾಗ ಕರಕಲಾದ ಸ್ಥಿತಿಯಲ್ಲಿತ್ತು. ಅಲ್ಲಿ ಆತ್ಮಹತ್ಯೆಯ ಕುರುಹು ಕಂಡು ಬರಲಿಲ್ಲ . ತಾ.11ರಂದು ರಾತ್ರಿ ಪೊಲೀಸ್ ಠಾಣೆಗೆ ತೆರಳಿ ತನ್ನ ಮಗಳು ಕೊಲೆಯಾಗಿದ್ದಾಳೆ ಎಂದು ದೂರು ನೀಡಿದಾಗ ಪೊಲೀಸರು ವರದಕ್ಷಿಣೆಯಿಂದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.

ಅಸ್ಮಾಳ ಪೋಷಕರಿಗೆ ನ್ಯಾಯ ದೊರಕಬೇಕಾದರೆ ಕೊಲೆ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವುಗಳು ನ್ಯಾಯಕ್ಕಾಗಿ ಹೋರಾಟ ಅನಿವಾರ್ಯ ಎಂದು ಇಬ್ರಾಹಿಂ ಹೇಳಿದರು. ಅಸ್ಮಾಳ ತಾಯಿ ನಬೀಶ ಮಾತನಾಡಿ ಮಗಳ ಕೊಲೆ ಮಾಡಲಾಗಿದೆ ಎಂಬುದಕ್ಕೆ ಅಳಿಯನ ಮನೆ ಆಜು ಬಾಜಿನವರು ಪರೋಕ್ಷವಾಗಿ ತಿಳಿಸಿದ್ದಾರೆ. ಪೊಲೀಸರ ತನಿಖೆಯಿಂದ ಪೂರ್ವ ನಿಯೋಜಿತ ಕೊಲೆಯ ನಿಜಾಂಶ ಬಯಲಿಗೆ ಬರಲಿದೆ, ಪ್ರಕರಣದ ಕುರಿತು ಹೆಚ್ಚಿನ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ದೂರು ನೀಡಲಾಗುವದು ಎಂದರು.

ಗೋಷ್ಠಿಯಲ್ಲಿ ಅಸ್ಮಾಳ ಅಕ್ಕ ಫಾತಿಮಾ, ಅಣ್ಣ ಹಬೀದ್, ಸಂಬಂಧಿಕರಾದ ಮುಝಾಮಿಲ್, ಝಕ್ರಿಯಾ ಉಪಸ್ಥಿತರಿದ್ದರು.