ಮಡಿಕೇರಿ, ಮಾ. 12: ಪ್ರಕೃತಿದತ್ತವಾದ ಕೊಡಗು ಜಿಲ್ಲೆ ಕೂಡ ಪ್ರಸಕ್ತ ವರ್ಷಗಳಲ್ಲಿ ಬರಡು ಭೂಮಿಯಂತಾಗುತ್ತಿರುವ ಆತಂಕಕಾರಿಯ ಬೆಳವಣಿಗೆ ಕೇವಲ ಜಿಲ್ಲೆಯ ಜನತೆಗೆ ಮಾತ್ರವಲ್ಲ... ಇಡೀ ರಾಜ್ಯಕ್ಕೂ ಎಚ್ಚರಿಕೆಯ ಗಂಟೆಯಂತೆ ಕಂಡುಬರುತ್ತಿದೆ. ಜಿಲ್ಲೆಯಾದ್ಯಂತ ದಿನೇ ದಿನೇ ರಣಬಿಸಿಲಿನ ಧಗೆ ಆರಂಭಗೊಂಡಿದ್ದು, ಪ್ರಾಕೃತಿಕವಾಗಿ ಈ ಅವಧಿಯಲ್ಲಿ ಸುರಿಯುತ್ತಿದ್ದ ಮಳೆಯ ಲಕ್ಷಣವೇ ಗೋಚರವಾಗುತ್ತಿಲ್ಲ. ಇದರೊಂದಿಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅರಣ್ಯ ಪ್ರದೇಶಗಳು, ಖಾಸಗಿ ಜಮೀನುಗಳು, ತೋಟಗಳು ಬೆಂಕಿಯ ಕೆನ್ನಾಲಿಗೆಗೆ ಈಡಾಗುತ್ತಿರುವದು ತೀರಾ ಆತಂಕಕಾರಿಯಾಗಿ ಪರಿಣಮಿಸುತ್ತಿದೆ.
ಜನವರಿ ಆರಂಭಗೊಂಡು ಮಾರ್ಚ್ 15 ಸಮೀಪಿಸಿದರೂ ಪ್ರಸಕ್ತ ವರ್ಷ ಮಳೆಯಾಗುವ ಯಾವದೇ ಸನ್ನಿವೇಶ ಗೋಚರವಾಗುತ್ತಿಲ್ಲ. ಈ ಅವಧಿಯಲ್ಲಿ ಅಲ್ಲಲ್ಲಿ ಆಗಾಗ್ಗೆ ಮೋಡ ಆವರಿಸಿ ನಡು ನಡುವೆ ಮಳೆ ಸುರಿಯುತ್ತಿದ್ದುದು ಕೊಡಗು ಜಿಲ್ಲೆಯನ್ನು ಒಂದಷ್ಟು ತಂಪಾಗಿಸುತ್ತಿತ್ತು. ಕೊಡಗು ಜಿಲ್ಲೆ ಧಾರ್ಮಿಕತೆಗೂ ಹೆಚ್ಚು ನಂಟು ಹೊಂದಿದ್ದು, ಜಿಲ್ಲೆಯ ವಿವಿಧೆಡೆಗಳಲ್ಲಿ ದೇವಸ್ಥಾನಗಳಲ್ಲಿ ಹಬ್ಬ - ಹರಿದಿನಗಳು ಆಚರಿಸಲ್ಪಡುತ್ತಿವೆ. ಆಯಾ ವಿಭಾಗದ ಹಬ್ಬಗಳ ಸಂದರ್ಭದಲ್ಲಿ ಒಂದಷ್ಟು ಮಳೆ ಸುರಿಯಬಹುದು ಎಂಬಂತೆ ಜನತೆ ದೇವರಲ್ಲಿ ನಂಬಿಕೆಯಿರಿಸಿದ್ದು, ಇದು ಜನತೆಯ ನಿರೀಕ್ಷೆ ನಂಬಿಕೆಯಂತೆ ನಡೆದುಕೊಂಡು ಬರುತ್ತಿತ್ತು. ಆದರೆ ಪ್ರಸಕ್ತ ವರ್ಷ...? ಇವು ಯಾವದೂ ನಡೆಯುತ್ತಿಲ್ಲ.
ಉತ್ತರ ಕರ್ನಾಟಕ ಮತ್ತಿತರ ಮಳೆಯಾಗದ ಕಡೆಗಳಲ್ಲಿ ಜನರು ಮಳೆಗಾಗಿ ಪರಿತಪಿಸುವಂತೆ ಕೊಡಗಿನ ಜನರೂ ಆಕಾಶವನ್ನು ದಿನಂಪ್ರತಿ ದಿಟ್ಟಿಸುವಂತಾಗಿದೆ. ಕೃಷಿ ಪ್ರಧಾನ ಜಿಲ್ಲೆಯಾದ ಜಿಲ್ಲೆಯ ಬದುಕೇ ಮಳೆ ಆಧಾರಿತ. ಆರ್ಥಿಕತೆ ಬೆನ್ನೆಲುಬಾಗಿರುವ ಕಾಫಿಗಂತೂ ಈ ಅವಧಿಯಲ್ಲಿ ನೀರು ಬೇಕೇ ಬೇಕು. ಕೆರೆ - ನದಿಗಳಲ್ಲಿ ನೀರಿನ ಸೌಲಭ್ಯ ಇರುವವರು ಒಂದಷ್ಟು ನೀರು ಹಾಯಿಸಿಕೊಳ್ಳುತ್ತಿದ್ದರೆ ಇತರರು ಮಳೆಗಾಗಿ ಚಾತಕ ಪಕ್ಷಿಯಂತೆ ಆಗಸವನ್ನೇ ದಿಟ್ಟಿಸುವಂತಾಗಿದೆ. ಮಳೆಯಾಗದಿರುವ ಪರಿಸ್ಥಿತಿ ಒಂದೆಡೆಯಾದರೆ ಪ್ರಸ್ತುತದ ಬಿಸಿಲಿನ ಬೇಗೆಯನ್ನು ಜನತೆ ಸಹಿಸಿಕೊಳ್ಳುವದು ಅಸಾಧ್ಯವಾಗುತ್ತಿದೆ. ಮಾರ್ಚ್ ಆರಂಭದ ವೇಳೆಯಲ್ಲಿ 30ರಿಂದ 34 ಡಿಗ್ರಿಯಷ್ಟು ತಾಪಮಾನ ಅಲ್ಲಲ್ಲಿ ಎದುರಾಗುತ್ತಿರುವದು ಕೊಡಗಿನ ಜನತೆಗೆ ಆತಂಕಭರಿತವಾದ ಹೊಸ ಅನುಭವದಂತಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. 11ರಂದು 31.1 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶ ಬಂದಿರುವದು ಈ ವರ್ಷದ ದಾಖಲೆಯಾದರೆ, ವೀರಾಜಪೇಟೆಯಲ್ಲಿ ಈ ಪ್ರಮಾಣ ಒಂದೆರಡು ದಿನಗಳ ಹಿಂದೆ 33 ಡಿಗ್ರಿ ದಾಟಿತ್ತು. ಕಂಡುಬಾರದ ಮಳೆ, ಏರುತ್ತಿರುವ ತಾಪಮಾನದ ನಡುವೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆವರಿಸುತ್ತಿರುವ ಬೆಂಕಿ ಮನುಷ್ಯಕುಲದೊಂದಿಗೆ ಪ್ರಾಣಿಸಂಕುಲವನ್ನೂ ಅಸಮತೋಲನಗೊಳಿಸುತ್ತಿವೆ. ಅಲ್ಲಲ್ಲಿ ಕಾಳ್ಗಿಚ್ಚು ಸಂಭವಿಸಿ ಅಪಾರ ಪ್ರಮಾಣದ ಅರಣ್ಯ ಪ್ರದೇಶ, ಆಸ್ತಿ-ಪಾಸ್ತಿಗಳು ಬೆಂಕಿಗೆ ಆಹುತಿಯಾಗುತ್ತಿವೆ. ಒಂದಲ್ಲಾ ಒಂದು ಕಡೆ ಬೆಂಕಿ ಸಂಭವಿಸುತ್ತಿರುವ ಕುರಿತು ದಿನಂಪ್ರತಿ ವರದಿಯಾಗುತ್ತಿವೆ. ಇಂತಹ ಪರಿಸ್ಥಿತಿಯ ನಡುವೆ ಕೆಲವು ಕಿಡಿಗೇಡಿಗಳು ಪ್ರಾಕೃತಿಕವಾದ ಕೊಡಗಿನ ಅರಣ್ಯ ಪ್ರದೇಶಕ್ಕೆ ತಾವೇ ಕೈಯಾರೆ ಬೆಂಕಿ ಇಟ್ಟು ಮತ್ತಷ್ಟು ಬರಡು ಪ್ರದೇಶವಾಗಿ ಮಾಡಲು ಹೊರಟಿರುವ ಕ್ರಮವೂ ತೀರಾ ಖಂಡನೀಯವಾಗಿದೆ. ಇಂತಹವರನ್ನು ಪತ್ತೆಹಚ್ಚಿ ಕಠಿಣ ಕ್ರಮದೊಂದಿಗೆ ಇತರರಲ್ಲಿ ಈ ಬಗ್ಗೆ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕಾಗಿದೆ.
ಅಂಕಿ- ಅಂಶಗಳೂ ಆತಂಕಕಾರಿ
ಕೃಷಿ ಇಲಾಖೆಯ ಮಾಹಿತಿಯಂತೆ ಜನವರಿಯಿಂದ ಮಾರ್ಚ್ ಈ ವೇಳೆಗೆ ವಾಡಿಕೆಯಂತೆ 1.49 ಇಂಚು ಮಳೆಯಾಗಬೇಕಿತ್ತು. ಆದರೆ ಪ್ರಸಕ್ತ ವರ್ಷ ಸಿಂಚನವಾಗಿರುವದು 0.09 ಸೆಂಟ್ ಮಾತ್ರ.
ಸೋಮವಾರಪೇಟೆ ತಾಲೂಕಿಗೆ ಈ ವೇಳೆಗೆ ವಾಡಿಕೆಯಂತೆ 0.85 ಸೆಂಟ್ ಮಳೆಯಾಗಬೇಕಿದ್ದು, ಈ ಬಾರಿ ಸುರಿದಿರುವದು 0.11 ಸೆಂಟ್ ಮಾತ್ರ. ವೀರಾಜಪೇಟೆ ತಾಲೂಕಿಗೆ ಜನವರಿಯಿಂದ ಈ ಅವಧಿಯಲ್ಲಿ 0.94 ಸೆಂಟ್ ವಾಡಿಕೆ ಮಳೆಯಾಗಬೇಕಿದ್ದು, ಈ ವರ್ಷ 0.33 ಸೆಂಟ್ ಮಾತ್ರ ಮಳೆಯಾಗಿದೆ. ಜಿಲ್ಲಾ ಸರಾಸರಿಯೂ ಆತಂಕಕಾರಿಯಾಗಿದೆ. ಜಿಲ್ಲೆಯಲ್ಲಿ ಈತನಕ ವಾಡಿಕೆಯಂತೆ 1.09 ಇಂಚು ಮಳೆಯಾಗಬೇಕಿದ್ದು, ಈ ಬಾರಿ ಕೇವಲ 0.18 ಸೆಂಟ್ ಸರಾಸರಿ ಮಳೆಯಾಗಿದೆ.
ವರ್ಷಂಪ್ರತಿ ಕುಸಿತ
ಕಳೆದ ಮೂರು ವರ್ಷಗಳಿಂದ ಸುರಿದ ಮಳೆಯನ್ನು ಹೋಲಿಸಿದರೆ ಈ ಪ್ರಮಾಣವೂ ಏರಿಳಿತವಾಗುವದರೊಂದಿಗೆ ದಿಗಿಲು ಮೂಡಿಸುವಂತಿದೆ. ಕಳೆದ ಎರಡು ವರ್ಷ ಕೊಡಗು ಬರಪೀಡಿತ ಪ್ರದೇಶ ಎಂದು ಸರಕಾರದಿಂದಲೇ ಘೋಷಿಸಲ್ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
2017ರಲ್ಲಿ ಈ ವೇಳೆಗೆ ಜಿಲ್ಲೆಗೆ ಅಕಾಲಿಕವಾಗಿ ಸುರಿದ ಮಳೆಯ ಪ್ರಯೋಜನದಂತೆ 2.25 ಇಂಚು ಮಳೆಯಾಗಿದ್ದರೆ, ಸೋಮವಾರಪೇಟೆಗೆ 2.88 ಇಂಚು ಹಾಗೂ ವೀರಾಜಪೇಟೆಗೆ 2.32 ಇಂಚು ಮಳೆ ಸುರಿದಿತ್ತು. ಅಕಾಲಿಕವಾಗಿ ಉಂಟಾದ ವಾತಾವರಣದ ಏರುಪೇರಿನಿಂದಷ್ಟೇ ಈ ಪ್ರಮಾಣದ ಮಳೆ ಜಿಲ್ಲೆಯಲ್ಲಿ ಬಿದ್ದಿತ್ತು. ಇದೇ ಮಳೆಯ ಪ್ರಮಾಣ 2016ರಲ್ಲಿ ಮಡಿಕೇರಿ ತಾಲೂಕಿನಲ್ಲಿ 0.52 ಸೆಂಟ್, ಸೋಮವಾರÀಪೇಟೆಯಲ್ಲಿ 0.14 ಹಾಗೂ ವೀರಾಜಪೇಟೆಯಲ್ಲಿ 0.18 ಸೆಂಟ್ ಮಾತ್ರವಿತ್ತು. 2018ರಲ್ಲೂ ಬಹುತೇಕ ಇದೇ ಚಿತ್ರಣ ಕಂಡುಬಂದಿದೆ. ಜನವರಿಯಿಂದ ಈತನಕ ಮಡಿಕೇರಿಗೆ 0.09, ಸೋಮವಾರಪೇಟೆಗೆ 0.11 ಹಾಗೂ ವೀರಾಜಪೇಟೆಗೆ 0.33 ಸೆಂಟ್ ಮಾತ್ರ ಮಳೆಯಾಗಿದೆ.
ಜಲಮೂಲಗಳು ಕ್ಷೀಣ
ಜಿಲ್ಲೆಯ ಈ ಪರಿಸ್ಥಿತಿಯಿಂದ ಬಹುತೇಕ ಕಡೆಗಳಲ್ಲಿ ಜಲಮೂಲಗಳು ಕ್ಷೀಣಿಸುತ್ತಿವೆ. ಕೆರೆ- ನದಿ- ತೊರೆಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಸ್ವಂತ ಉಪಯೋಗದ ಬಾವಿಗಳಲ್ಲೂ ನೀರು ಕ್ಷೀಣಿಸುತ್ತಿದ್ದು, ಜನತೆ ಆತಂಕಗೊಳ್ಳುವಂತಾಗಿದೆ. ಜಿಲ್ಲಾಡಳಿತ, ನಗರಸಭೆ, ಪಟ್ಟಣ ಪಂಚಾಯಿತಿಗಳು, ಗ್ರಾಮಸಭೆಗಳು ಬೇಸಿಗೆಯ ಈ ಪರ್ವಕಾಲವನ್ನು ಚುನಾವಣಾ ವರ್ಷದ ಕಾವಿನ ನಡುವೆ ನಿಭಾಯಿಸಬೇಕಾಗಿದೆ. ಸಾರ್ವಜನಿಕವಾಗಿ ಪೂರೈಕೆಯಾಗುವ ನೀರನ್ನು ಅವಲಂಬಿಸದೆ ತಮ್ಮಷ್ಟಕ್ಕೆ ವ್ಯವಸ್ಥೆ ಕಲ್ಪಿಸಿಕೊಂಡಿದ್ದ ಮಂದಿಯೂ ಕಳೆದ ಒಂದೆರಡು ವರ್ಷದಿಂದ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.