ಸೋಮವಾರಪೇಟೆ,ಮಾ.12: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಲವು ಅವ್ಯವಹಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕುಂಬೂರು ಗ್ರಾಮದ ಎ.ಜೆ. ಬಸ್ ನಿಲ್ದಾಣದ ಬಳಿ ಉದ್ಯೋಗ ಖಾತ್ರಿಯಡಿ ಮತ್ತು 14ನೇ ಹಣಕಾಸು ಯೋಜನೆಯಡಿ ನಕಲಿ ಬಿಲ್ ಸೃಷ್ಟಿಸಿ ಹಣ ದುರುಪಯೋಗ ಮಾಡಲಾಗಿದೆ. ಇದರೊಂದಿಗೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ 3 ವರ್ಷಗಳಿಂದ ನಡೆದಿರುವ ಎಲ್ಲಾ ಕಾಮಗಾರಿಗಳ ತನಿಖೆಯನ್ನು ಒಂಬುಡ್ಸ್‍ಮನ್ ಅಥವಾ ಎಸಿಬಿ ತನಿಖೆಗೆ ವಹಿಸಬೇಕೆಂದು ಗ್ರಾ.ಪಂ. ಮಾಜೀ ಅಧ್ಯಕ್ಷ ಭಾಸ್ಕರ್ ಸಾಯಿ ಆಗ್ರಹಿಸಿದರು.ಇದರೊಂದಿಗೆ ಅವ್ಯವಹಾರಗಳಿಗೆ ಕೇವಲ ಅಧ್ಯಕ್ಷರು ಮತ್ತು ಪಿಡಿಓ, ಅಭಿಯಂತರರನ್ನು ಹೊಣೆಗಾರರನ್ನಾಗಿ ಮಾಡದೇ ಆ ವಾರ್ಡ್ ಪ್ರತಿನಿಧಿಸುವ ಸದಸ್ಯರನ್ನೂ ಹೊಣೆ ಮಾಡಬೇಕು. ಇದೀಗ ಬಂದಿರುವ ದಕ್ಷ ಪಿಡಿಓ ಅವರನ್ನು ವರ್ಗಾವಣೆ ಮಾಡಬಾರದು. ಅವ್ಯವಹಾರಗಳನ್ನು ಗ್ರಾಮ ಸಭೆಯಲ್ಲಿ ಪ್ರಶ್ನಿಸಿದ ಸಂದರ್ಭ ಅಟ್ರಾಸಿಟಿ ಕೇಸ್ ಹಾಕುತ್ತೇವೆ ಎಂದು ಬೆದರಿಸಿರುವ ಮೂವರು ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಗ್ರಾ.ಪಂ. ಮಾಜೀ ಅಧ್ಯಕ್ಷ ಎಂ.ಕೆ. ತಿಮ್ಮಯ್ಯ, ಮೂವತ್ತೊಕ್ಲು ಗ್ರಾಮದ ನಾಗಂಡ ಭವಿನ್, ರಘು ಕಾರ್ಯಪ್ಪ, ಮಂಜು, ಜಯರಾಂ ಸೇರಿದಂತೆ ಇತರರು ಉಪಸ್ಥಿತರಿದ್ದು, ಮನವಿ ಪತ್ರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಿಟ್ಟಿಯಪ್ಪ ಅವರಿಗೆ ಸಲ್ಲಿಸಿದರು.