ವೀರಾಜಪೇಟೆ, ಮಾ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಿಗೆ ಪಟ್ಟಣದ ಅಭಿವೃದ್ಧಿ ಕುರಿತು ಯಾವದೇ ಕಾಳಜಿ ಇಲ್ಲ. ಒಂದು ವರ್ಷದ ಅವಧಿಯಲ್ಲಿ ಯಾವದೇ ಜನಪರ ಕಾಮಗಾರಿಗಳು ನಡೆದಿಲ್ಲ. ನಡೆದಿದ್ದ ಸಣ್ಣ ಪುಟ್ಟ ಕಾಮಗಾರಿಗಳು ಅತ್ಯಂತ ಕಳಪೆ ಮಟ್ಟದ್ದಾಗಿದೆ. ಅಧ್ಯಕ್ಷ ಇ.ಸಿ.ಜೀವನ್ ಪಟ್ಟಣದ ನಾಗರಿಕರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಜೆ.ಡಿ.ಎಸ್.ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಆರೋಪಿಸಿದ್ದಾರೆ.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್ ಇ.ಸಿ.ಜೀವನ್ ಪರವಹಿಸಿಕೊಂಡು ಬಿ.ಜೆ.ಪಿ.ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಟಿ.ಪಿ.ಕೃಷ್ಣ ಅವರು ಜೆ.ಡಿ.ಎಸ್. ವಿರುದ್ದ ಮಾಡಿರುವ ಆರೋಪ ಹುರುಳಿಲ್ಲದ್ದು. ಪಟ್ಟಣ ಪಂಚಾಯಿತಿಯಲ್ಲಿ ಯಾವದೇ ಜನಪರ ಕೆಲಸವಾಗುತ್ತಿಲ್ಲ. ಇದರಿಂದ ಮಾಸಿಕ ಸಭೆಯನ್ನು ಅನಿವಾರ್ಯ ಕಾರಣ ನೀಡಿ ಮುಂದೂಡಿರುವದು ಪಟ್ಟಣದ ಅಭಿವೃದ್ದಿ ಕಾರ್ಯಕ್ಕೆ ವಿರುದ್ದವಾಗಿದೆ.
ಬಿ.ಜೆ.ಪಿ ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಜೆ. ದಿವಾಕರಶೆಟ್ಟಿ ಅವರು ಪಟ್ಟಣ ಪಂಚಾಯಿತಿಯಲ್ಲಿ ಪ್ರಭಾವದಿಂದ ಕಾಮಗಾರಿ ಗುತ್ತಿಗೆಯನ್ನು ಪಡೆದು ನ್ಯಾಯಾಲಯದ ರಸ್ತೆಯ ಕಾಂಕ್ರಿಟ್ ಚರಂಡಿ, ಎಸ್.ಬಿ.ಐ ಬಳಿಯ ಚರಂಡಿ, ಮಾರಿಯಮ್ಮ ದೇವಾಲಯದ ಬಳಿಯ ಅಂಗನವಾಡಿ ಕಳಪೆ ಕಾಮಗಾರಿಯಿಂದ ಕೂಡಿದೆ. ಇದರ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವದು. ಇ.ಸಿ.ಜೀವನ್ ಅವರ ಇಚ್ಚಾಶಕ್ತಿಯ ಕೊರತೆಯಿಂದ ಸುಣ್ಣದ ಬೀದಿಯ ಎರಡು ಬದಿಯಲ್ಲಿ ಅವೈಜ್ಞಾನಿಕವಾಗಿ ಟೈಲ್ಸ್‍ಗಳನ್ನು ಅಳವಡಿಸಲಾಗಿದೆ. ಚರಂಡಿ ದುರಸ್ತಿಯಾದಾಗ ಟೈಲ್ಸ್‍ಗಳನ್ನು ಮತ್ತೆ ಒಡೆಯಬೇಕಾಗಿ ಬರಬಹುದು ಎಂದು ಮಂಜುನಾಥ್ ದೂರಿದರು.
ಜೆಡಿಎಸ್‍ನ ಯುವಕ ಘಟಕದ ತಾಲೂಕು ಸಮಿತಿ ಅಧ್ಯಕ್ಷ ಅಮ್ಮಂಡ ವಿವೇಕ್ ಮಾತನಾಡಿ ಕೆಎಸ್‍ಆರ್‍ಟಿಸಿ ಬಳಿಯಲ್ಲಿ ಇಂದಿರಾ ಕ್ಯಾಂಟೀನ್‍ಗೆ ಜಾಗ ಗುರುತಿಸಿದಾಗ ಮರ ಕಡಿಯದಂತೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದು ಅವಿವೇಕಿತನ. ಅಭಿವೃದ್ಧಿಗೆ ಅಡ್ಡಿ ಪಡಿಸುವವರನ್ನು ಯಾವ ಪಕ್ಷವು ಗೌರವಿಸುವದಿಲ್ಲ ಎನ್ನುವದನ್ನುಕಾರ್ಯಕರ್ತರು ಅರಿಯಬೇಕು ಎಂದರು.
ಗೋಷ್ಠಿಯಲ್ಲಿ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಹರ್ಷ, ನಗರ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷೆ ವೀಣಾ ಗಣೇಶ್, ಯುವ ಘಟಕದ ನಗರ ಸಮಿತಿ ಅಧ್ಯಕ್ಷ ಚಿಲ್ಲವಂಡ ಗಣಪತಿ ಉಮೇಶ್ ಉಪಸ್ಥಿತರಿದ್ದರು.