ಆನೆ ಧಾಳಿ ಶಾಶ್ವತ ಪರಿಹಾರಕ್ಕೆ ಗಡುವು ಸಿದ್ದಾಪುರ, ಮಾ.12: ಮುಂದಿನ ಒಂದು ವಾರದೊಳಗೆ ರಾಜ್ಯ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಯೋಜನೆಯನ್ನು ರೂಪಿಸದಿದ್ದಲ್ಲಿ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವದು ತಪ್ಪಿದ್ದಲ್ಲಿ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜಿಲ್ಲೆಯ ಜನತೆಯನ್ನು ಒಗ್ಗೂಡಿಸಿ ನಿರಂತರ ಉಪವಾಸ ಸತ್ಯಾಗ್ರಹ ಮಾಡುವದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ಸಿದ್ದಾಪುರದ ಸಣ್ಣ ಬೆಳೆಗಾರರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಡಾನೆ ಧಾಳಿಗೆ ಸಿಲುಕಿ 42 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ ಕಳೆದ ಐದು ವರ್ಷದಲ್ಲಿ 6,628 ಫಸಲು ನಷ್ಟ ಪ್ರಕರಣಗಳು ದಾಖಲಾಗಿದ್ದು, ಹುಲಿ ಧಾಳಿಯಿಂದಾಗಿ 42 ಜಾನುವಾರುಗಳು ಮೃತಪಟ್ಟಿವೆ. ಇದಲ್ಲದೆ ಕಾಡಾನೆ ಧಾಳಿಗೆ ಸಿಲುಕಿ ನೂರಾರು ಮಂದಿ ಶಾಶ್ವತ ಅಂಗವೈಫಲ್ಯದಿಂದ ಬಳಲುತ್ತಿದ್ದು, ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿಮೀರಿದ್ದರೂ ಕೂಡ ಜಿಲ್ಲೆಗೆ ಅರಣ್ಯ ಸಚಿವರು ಭೇಟಿ ನೀಡದೆ ಹಾಗೂ ಶಾಶ್ವತ ಯೋಜನೆಯನ್ನು ರೂಪಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು. ಸಚಿವ ರಮಾನಾಥ ರೈ ಅವರು ತಾ. 19 ರೊಳಗೆ ಜಿಲ್ಲೆಗೆ ಭೇಟಿ ನೀಡಿ ವನ್ಯ ಪ್ರಾಣಿಗಳ ಹಾವಳಿ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಖುದ್ದಾಗಿ ಭೇಟಿ ನೀಡಿ ಮೊಕದ್ದಮೆ ದಾಖಲಿಸುವದಾಗಿ ಎಚ್ಚರಿಸಿದರು. ತಪ್ಪಿದ್ದಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲೆಯ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಉಪವಾಸ ಸತ್ಯಾಗ್ರಹ ನಡೆಸುವದಾಗಿ ತಿಳಿಸಿದರು. ಇತ್ತೀಚೆಗೆ ಸಮಿತಿಯ ವತಿಯಿಂದ ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ನೀಡಿದ ಭರವಸೆಗಳನ್ನು ನಡೆಸಿ, ಮೃತನ ಸ್ವಗ್ರಾಮವಾದ ಸಾಲಿಗ್ರಾಮಕ್ಕೆ ಸಾಗಿಸಿರುವದು ಖಂಡನೀಯ ಎಂದರು. ಅರಣ್ಯ ಇಲಾಖೆ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಸಂಚಾಲಕ ಮಂಡೇಪಂಡ ಪ್ರವೀಣ್ ಬೋಪಣ್ಣ ಮಾತನಾಡಿ, ಅರಣ್ಯ ಇಲಾಖೆಯ ವೈಫಲ್ಯವನ್ನು ಮುಚ್ಚಿಡಲು ರಾತ್ರೋರಾತ್ರಿ ಮೃತದೇಹವನ್ನು ಆ್ಯಂಬ್ಯುಲನ್ಸ್ ಮೂಲಕ ಸಾಗಿಸಿರುವದು ಸರಿಯಾದ ಕ್ರಮವಲ್ಲ ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯತನದಿಂದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೂರಿದರು. ಇದೀಗ ವನ್ಯ ಪ್ರಾಣಿಗಳು ಕಾಡಿನಿಂದ ಆಹಾರವನ್ನು ಆರಿಸಿಕೊಂಡು ನಾಡಿಗೆ ಬರುತ್ತಿದ್ದು, ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ, ಇದರಿಂದ ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತರು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ಕೆ. ಬಿ ಹೇಮಚಂದ್ರ, ಮುಖಂಡರು ಗಳಾದ ನಡಿಕೇರಿಯಂಡ ಮಾಚಯ್ಯ, ಮಂಡೇಪಂಡ ಅರ್ಜುನ್, ಹೆಚ್. ಬಿ ರಮೇಶ್, ದೇವಣಿರ ವಜ್ರ, ಬುಟ್ಟಿಯಂಡ ಹರಿಸೋಮಯ್ಯ, ಪಾಂಡಂಡ ರಾಜಗಣಪತಿ ಇನ್ನಿತರರು ಹಾಜರಿದ್ದರು.