ಸೋಮವಾರಪೇಟೆ, ಮಾ.12 : ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ನಾಮಫಲಕಗಳಿಗೆ ಮಸಿ ಬಳಿದು ಉರ್ದು ಭಾಷೆಯ ಫಲಕ ಅಳವಡಿಸುವಂತೆ ಒತ್ತಾಯಿಸಿರುವ ಕ್ರಮವನ್ನು ಖಂಡಿಸಿ ಸೋಮವಾರ ಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣ ದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು, ಕನ್ನಡ ನಾಮಫಲಕಗಳಿಗೆ ಮಸಿ ಬಳಿದ ಅವಿವೇಕಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ ಮೃದು ಧೋರಣೆ ತಳೆದಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಆರೋಪಿಸಿದರು.

ಕಲಬುರ್ಗಿಯಲ್ಲಿ ಉರ್ದು ಭಾಷಿಕರು ಹೆಚ್ಚಿರುವ ಕಾರಣ ಕನ್ನಡ ಭಾಷೆಯನ್ನು ಬದಿಗಿಟ್ಟು ಉರ್ದು ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕೆಂದು ಹಲವು ಅವಿವೇಕಿಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿರುವದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ದೀಪಕ್ ಅಭಿಪ್ರಾಯಿಸಿದರು.

ಭಾಷಾ ಭಾವೈಕ್ಯತೆಗೆ ಧಕ್ಕೆ ತರುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಉರ್ದು ಭಾಷಿಕರ ಪರ ನಿಂತಿರುವದು ಸರಿಯಲ್ಲ. ಓಟ್ ಬ್ಯಾಂಕ್‍ಗಾಗಿ ಸರ್ಕಾರಗಳು ಕನ್ನಡ ಭಾಷೆಗೆ ಅವಮಾನ ಮಾಡಿದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ಸಂಘಟಿಸಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರವೇ ತಾಲೂಕು ಕಾರ್ಯದರ್ಶಿ ರೋಹಿತ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ಪದಾಧಿಕಾರಿಗಳಾದ ಚಂದ್ರು, ಲೋಕೇಶ್ ಗೌಡ, ಜಗನ್ನಾಥ್, ಸತೀಶ್, ಶರತ್, ಭೋವಿ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಜಿತ್ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸಂಬಂಧಿತ ಮನವಿಯನ್ನು ಶಿರಸ್ತೇದಾರ್ ಶಶಿಧರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.