ಮಡಿಕೇರಿ, ಮಾ. 12: ಎಮ್ಮೆಮಾಡು ಉರೂಸ್ ದಿನದಂದು ಮಸೀದಿಗೆ ತೆರಳಿದ್ದ ಕುಂಜಿಲ ಗ್ರಾಮದ ನಿವಾಸಿ ಅಬ್ದುಲ್ ರಜಾಕ್ ಎಂಬವರ ಮನೆಗೆ ನುಗ್ಗಿ ನಗದು ದೋಚಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ದುಬೈನಿಂದ ಹಿಂತಿರುಗಿರುವ ಅಬ್ದುಲ್ ರಜಾಕ್ ಮನೆಯಲ್ಲಿ ರೂ. 50 ಸಾವಿರ ನಗದು ಹಾಗೂ ಗಲ್ಫ್ ಹಣ 6000 ರಿಯಲ್ (ಸುಮಾರು ರೂ. 1 ಲಕ್ಷ ಭಾರತೀಯ ಮೌಲ್ಯ) ಅನ್ನು ಕಿಸೆಯಲ್ಲಿ ಇರಿಸಿ ಪ್ರಾರ್ಥನೆಗೆ ತೆರಳಿದ್ದರೆಂದು ಗೊತ್ತಾಗಿದೆ.

ಸಮಯ ಸಾಧಿಸಿದ ಕಳ್ಳರು ಮನೆ ಹಿಂಬಾಗಿಲು ಮುರಿದು ಒಳನುಗ್ಗಿ ಹಣ ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಅಬ್ದುಲ್ ರಜಾಕ್ ನಾಪೋಕ್ಲು ಠಾಣೆಗೆ ದೂರು ಸಲ್ಲಿಸಿದ್ದರು. ಆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಈ ನಡುವೆ ಕುಂಜಿಲ ನಿವಾಸಿಗಳಾದ ಹರ್ಷದ್, ಶಾಕೀರ್, ಅಮೀರ್ ಸುಹೇಲ್ ಎಂಬವರು ರಹಸ್ಯವಾಗಿ ಕೆಲವರನ್ನು ಭೇಟಿಯಾಗಿ ರಿಯಲ್ ಅನ್ನು ಪರಿವರ್ತಿಸಲು ಯತ್ನಿಸುತ್ತಿದ್ದ ಸುಳಿವಿನ ಮೇರೆಗೆ ಪೊಲೀಸರು ಈ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಕಳವಾಗಿದ್ದ 6000 ರಿಯಲ್ ಸಹಿತ ರೂ. 24 ಸಾವಿರ ನಗದು ವಶಪಡಿಸಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಪ್ರದೀಪ್ ಹಾಗೂ ಠಾಣಾಧಿಕಾರಿ ನಂಜುಂಡಸ್ವಾಮಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿ ದ್ದಾಗಿ ತಿಳಿದು ಬಂದಿದೆ.