ಶ್ರೀಮಂಗಲ, ಮಾ. 12: ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿ ಧಾಳಿ ಮರುಕಳಿಸಿದೆ. ಭಾನುವಾರ ರಾತ್ರಿ ಗ್ರಾಮದ ಚೆಟ್ಟಂಗಡ ನವೀನ್ ಭೀಮಯ್ಯ ಅವರ ಹಸುವಿನ ಮೇಲೆ ಹುಲಿ ಧಾಳಿ ನಡೆಸಿ ಗಾಯಗೊಳಿಸಿದೆ. ರಾತ್ರಿ ಲೈನ್ ಮನೆಯ ಹತ್ತಿರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ಧಾಳಿ ನಡೆಸಿದ ಸದ್ದಿಗೆ ಲೈನ್ ಮನೆಯಿಂದ ಕಾರ್ಮಿಕರು ಎಚ್ಚರಗೊಂಡು ಕೂಗಿದ ಪರಿಣಾಮ ಹುಲಿ ಅಲ್ಲಿಂದ ಕಾಲ್ಕಿತ್ತಿದೆ.

ಕಳೆದ ತಾ.3 ರಂದು ನವೀನ್ ಭೀಮಯ್ಯ ಅವರ ಹಸುವಿನ ಮೇಲೆ ಹುಲಿ ಧಾಳಿ ನಡೆಸಿ ಸಾಯಿಸಿತ್ತು. ಇದೀಗ ಇದೇ ಸ್ಥಳದಲ್ಲಿ ಒಂದು ವಾರದ ನಂತರ ಮತ್ತೆ ಹುಲಿ ಧಾಳಿ ನಡೆದಿದೆ. ಹಸುವಿಗೆ ಚಿಕಿತ್ಸೆ ನೀಡಲಾಗಿದ್ದು ಹಸುವಿನ ಬೆನ್ನಿನ ಭಾಗಕ್ಕೆ ಹುಲಿಯ ಉಗುರಿನಿಂದ ಪರಚಿದ ಗಾಯಗಳಾಗಿದೆ. ಶ್ರೀಮಂಗಲ ಮತ್ತು ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿ ಕಾರ್ಯಾಚರಣೆ ಕೈಗೊಂಡಿದ್ದು ಸಮೀಪದ ತೋಟದಲ್ಲಿ ಹುಲಿಯ ಘರ್ಜನೆಯು ಕೇಳಿ ಬಂದಿದ್ದು, ಇದರಿಂದ ಸಿಬ್ಬಂದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಕಳೆದ ವಾರವಷ್ಟೇ ಮೂರು ಹುಲಿ ಧಾಳಿ ಪ್ರಕರಣದಲ್ಲಿ ಮೂರು ಹಸುಗಳು ಬಲಿಯಾಗಿದ್ದು, ಗ್ರಾಮದ ಚೆಟ್ಟಂಗಡ ರಾಜ ನಂಜಪ್ಪ ಅವರ ಗದ್ದೆಯ ಸಮೀಪ ಹುಲಿ ಸೆರೆಗೆ ಬೋನನ್ನು ಇಡಲಾಗಿದೆ.