ಸೋಮವಾರಪೇಟೆ,ಮಾ.12: ಎರಡು ದಿನಗಳ ಕಾಲ ನಡೆಯುವ ಇಲ್ಲಿನ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದ್ದು, ತಾ. 13ರಂದು (ಇಂದು) ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.
ಬೆಳಗ್ಗಿನ ಜಾವ ಕ್ಷೇತ್ರದಲ್ಲಿ ಗಣಪತಿ ಹೋಮ, ಶುದ್ಧಿಪುಣ್ಯ, ಧ್ವಜಾ ರೋಹಣ ನಡೆಯಿತು. ಕೊಳಪುರತ್ ಮನಹಿಲ್ಲಂ ತಂತ್ರಿಗಳಾದ ಕೃಷ್ಣ ಕುಮಾರ್ ಪೌರೋಹಿತ್ಯದಲ್ಲಿ ನಾಗರಾಜ ಮತ್ತು ನಾಗಕನ್ಯೆ ದೇವರುಗಳ ಪುನರ್ ಪ್ರತಿಷ್ಠಾಪನೆ ನೆರವೇರಿತು.
ಪುರೋಹಿತರಾದ ಪ್ರಕಾಶ್, ಶಂಕರ ನಾರಾಯಣ, ಯದುಕೃಷ್ಣನ್ ಹಾಗೂ ಸ್ಥಳೀಯ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಮತ್ತು ಅರ್ಚಕ ಜಗದೀಶ್ ಉಡುಪ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.
ನೂತನವಾಗಿ ನಿರ್ಮಿಸಲಾಗಿರುವ ಭುವನೇಶ್ವರಿ ದೇವಿಯ ಮುಖ ಮಂಟಪವನ್ನು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮದ ಮೇಲೆ ನಂಬಿಕೆ ಮುಖ್ಯ. ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನಾದರೂ ದೇವಸ್ಥಾನ ಅಥವಾ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿದರೆ ಜೀವನದಲ್ಲಿ ಸಂತೃಪ್ತಿ ಲಭಿಸುತ್ತದೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಮಹಿಳಾ ಸಮಾಜ ಅಧ್ಯಕ್ಷೆ ನಳಿನಿ ಗಣೇಶ್ ಭಾಗವಹಿಸಿದ್ದರು.
ಕ್ಷೇತ್ರದಲ್ಲಿ ಭಗವತಿ, ಕಂಡಕರ್ಣ, ಪೊಟ್ಟನ್, ಕರಿಂಗುಟ್ಟಿ ಶಾಸ್ತಾವು, ಮುತ್ತಪ್ಪ-ತಿರುವಪ್ಪ, ರಕ್ತಚಾಮುಂಡಿ, ವಿಷ್ಣುಮೂರ್ತಿ, ಗುಳಿಗ ದೈವಗಳ ಕೋಲಗಳು ನಡೆದವು. ತಾ.13ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಕಂಡಕರ್ಣ ದೈವದ ಗುರುಶ್ರೀದರ್ಪಣ, ಮಧ್ಯಾಹ್ನ 1.30ಕ್ಕೆ ಗುಳಿಗ ದೇವರಿಗೆ ವಿಶೇಷ ಪೂಜೆ ನಡೆದು, ಅಪರಾಹ್ನ 3 ಗಂಟೆಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.