ಕರಿಕೆ, ಮಾ. 13: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ರಕ್ಷಿತಾರಣ್ಯ ಹಾಗೂ ಇತರ ಅರಣ್ಯ ಪ್ರದೇಶಗಳಲ್ಲಿ ಪ್ರಸ್ತುತ ಬೇಸಿಗೆಯ ಕಾಲದಲ್ಲಿ ಬೆಂಕಿ ಪೀಡಿತ - ಸಂಭವನೀಯ ಪ್ರದೇಶಗಳಲ್ಲಿ ಬೆಂಕಿ ಬೀಳುವ ಸಾಧ್ಯತೆಗಳಿರುವದರಿಂದ ಹಾಗೂ ತಾ. 10 ರಂದು ತಮಿಳುನಾಡು ಅರಣ್ಯ ಪ್ರದೇಶದಲ್ಲಿ ಚಾರಣಿಗರಿಂದ ಉಂಟಾದ ಬೆಂಕಿ ಅನಾಹುತದಲ್ಲಿ ಹಲವು ಮಕ್ಕಳು ಚಾರಣಿಗರು ಮತ್ತು ಇತರ ಸಾರ್ವಜನಿಕರು ಸಾವಿಗೀಡಾಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಚಾರಣಕ್ಕೆ ನಿರ್ಬಂಧ(ಮೊದಲ ಪುಟದಿಂದ) ಕೊಡಗು ಜಿಲ್ಲೆಯ ಮಾಲ್ದಾರೆ, ದುಬಾರೆ, ಕೋಪಟ್ಟಿ, ಬ್ರಹ್ಮಗಿರಿ ವನ್ಯಧಾಮಗಳು ಹಾಗೂ ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರು ಬೇಸಿಗೆ ಕಾಲ ಪೂರ್ಣಗೊಳ್ಳುವವರೆಗೆ ಒಂದೆರಡು ಮಳೆ ಬೀಳುವವರೆಗೆ ರಕ್ಷಿತಾರಣ್ಯ ಹಾಗೂ ಇತರ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಚಾರಣ ಕೈಗೊಳ್ಳಲು ಯಾವದೇ ಅನುಮತಿ ನೀಡದಿರಲು ಆದೇಶ ಹೊರಡಿಸಿದೆ. - ಸುಧೀರ್ ಹೊದ್ದೆಟ್ಟಿ