ಭಾಗಮಂಡಲ, ಮಾ. 13: 2016-17ನೇ ಸಾಲಿನ ಮುಖ್ಯಮಂತ್ರಿ ಗಳ ವಿಶೇಷ ಪ್ಯಾಕೇಜ್ ನಡಿ ಬೇಂಗೂರು ಪಂಚಾಯಿತಿಯ ಕೊಳಗದಾಳು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಪಾಕ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ರಸ್ತೆ 7 ಲಕ್ಷ ರೂ., ಬಿಟ್ಟಂಡ ಕುಟುಂಬಸ್ಥರ ರಸ್ತೆ 4 ಲಕ್ಷ ರೂ., ಬಿನ್ನೋಜಿ ಕುಟುಂಬಸ್ಥರ ರಸ್ತೆ 3 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಯಿತು. ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ನೀಡಿರುವದರಿಂದ ಜಿಲ್ಲೆಯ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಕಾಣುತ್ತಿವೆ ಎಂದರು.
ಜಿಲ್ಲೆಯಲ್ಲಿ ಹುಟ್ಟುವ ಕಾವೇರಿ ನದಿಯ ನೀರಿನ ಋಣವನ್ನು ತೀರಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಬಣ್ಣಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ನಾಲ್ಕು ವರ್ಷಗಳಿಂದ ವಿಶೇಷ ಪ್ಯಾಕೇಜ್ ಬರುತ್ತಿದ್ದು, ಜಿಲ್ಲೆಯ ಜನತೆ ನೆಮ್ಮದಿ ಯಿಂದ ಇದ್ದಾರೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಗ್ರಾಮಸ್ಥರೇ ಕಾಳಜಿ ವಹಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ 2013 ರ ಮೇ ತಿಂಗಳಿನಿಂದ 2017ರ ನವೆಂಬರ್ ಅಂತ್ಯದವರೆಗೆ ಸುಮಾರು 2,450 ಕೋಟಿ ರೂ.ಗಳ ಅನುದಾನ ಜಿಲ್ಲೆಗೆ ಕಾಂಗ್ರೆಸ್ ನಾಯಕರ ಪ್ರಯತ್ನದಿಂದ ಬಂದಿದ್ದು, ಪಾರದರ್ಶಕವಾಗಿ ಅನುದಾನದ ಬಳಕೆ ಆಗಿದೆ ಎಂದು ಶಿವುಮಾದಪ್ಪ ಹರ್ಷ ವ್ಯಕ್ತಪಡಿಸಿದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹ್ಯಾರಿಸ್, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಕರಿಕೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ನಾಯರ್, ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೆದಂಬಾಡಿ ರಮೇಶ್, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಅಮೀನ, ಸುರಯ್ಯ ಅಬ್ರಾರ್, ಕಾಂಗ್ರೆಸ್ ಮುಖಂಡರಾದ ದೇವಂಗೋಡಿ ಹರ್ಷ ದೊರೆಮಣಿ, ಬಷೀರ್, ಅಚ್ಚಿನಂಡ ಚೀಯಣ್ಣ, ಬಡ್ಡೀರ ಸೋಮಣ್ಣ, ಬಿಟ್ಟಂಡ ಜೀವನ್, ಬಿಟ್ಟಂಡ ಬೋಪಯ್ಯ, ಮುಕ್ಕಾಟಿ ಸಾಬು, ನಾಣಯ್ಯ, ಚಂಗಪ್ಪ, ಪಟ್ಟಮಾಡ ಬೋಪಣ್ಣ ಬಾಚಿಂಡ ಹ್ಯಾರಿ, ಪಟ್ಟಮಾಡ ಸತ್ಯ, ಕೂರನ ವೇಣು, ಬಬಿನ್, ನರೆನ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರಜ್ ಹೊಸೂರು ವಂದಿಸಿದರು.