ಗೋಣಿಕೊಪ್ಪಲು, ಮಾ. 13: ಕಳೆದ ಹಲವು ತಿಂಗಳಿನಿಂದ ಮಾಯಮುಡಿ ವ್ಯಾಪ್ತಿಯಲ್ಲಿ ಬಿಎಸ್‍ಎನ್‍ಎಲ್ ದೂರವಾಣಿ ಸೇವೆ ಅಸ್ತವ್ಯಸ್ತಗೊಂಡಿರುವದಾಗಿ ಅಲ್ಲಿನ ಜಿ.ಪಂ.ಸದಸ್ಯ ಬಿ.ಎನ್. ಪ್ರಥ್ಯು ಹಾಗೂ ಗ್ರಾಮಸ್ಥರು ದೂರಿದ್ದಾರೆ.

ಅಲ್ಲಿನ ಖಾಸಗಿ ವ್ಯಕ್ತಿಯ ಜಾಗದಲ್ಲಿ ಬಿಎಸ್‍ಎನ್‍ಎಲ್ ಗೋಪುರ ಅಳವಡಿಸಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭ ಅಲ್ಲಿನ ಬಿಎಸ್‍ಎನ್‍ಎಲ್ ಗ್ರಾಹಕರ ಮೊಬೈಲ್ ಫೆÇೀನ್‍ಗಳು ಹಾಗೂ ಸ್ಥಿರ ದೂರವಾಣಿಗಳು ಸ್ತಬ್ಧಗೊಳ್ಳುತ್ತವೆ. ವಿದ್ಯುತ್ ನಿಲುಗಡೆ ಸಂದರ್ಭ ಡೀಸೆಲ್ ಚಾಲಿತ ಜನರೇಟರ್ ಚಾಲನೆಗೊಳ್ಳಬೇಕಿದ್ದು, ಕಳೆದ ಹಲವು ತಿಂಗಳಿನಿಂದ ಮಾಯಮುಡಿ ಗೋಪುರ ಕಾರ್ಯಾಚರಿಸಲು ಅಗತ್ಯವಾದ ಡೀಸೆಲ್ ಕೂಡಾ ಗೋಣಿಕೊಪ್ಪಲು ಬಿಎಸ್‍ಎನ್‍ಎಲ್ ಅಧಿಕಾರಿಗಳು ವಿತರಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ದೂರಿದರೂ ಪ್ರಯೋಜನವಾಗುತ್ತಿಲ್ಲ. ಇನ್ನು ವಾರದ ಅವಧಿಯಲ್ಲಿ ಬಿಎಸ್‍ಎನ್‍ಎಲ್ ಸೇವೆ ಸಮರ್ಪಕವಾಗದಿದ್ದಲ್ಲಿ ಗ್ರಾಮಸ್ಥರೊಡಗೂಡಿ ಗೋಣಿಕೊಪ್ಪಲು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಬಿ.ಎನ್.ಪ್ರಥ್ಯು ತಿಳಿಸಿದ್ದಾರೆ.