ಶನಿವಾರಸಂತೆ, ಮಾ. 13: ಪಟ್ಟಣದಿಂದ 3 ಕಿ.ಮೀ. ದೂರದ ಚಿಕ್ಕಕೊಳತ್ತೂರು ಗ್ರಾಮದಲ್ಲಿ 400 ವರ್ಷಗಳ ಇತಿಹಾಸ ಇರುವ ಬಾವಿ ಬಸವೇಶ್ವರ ದೇವಾಲಯದಲ್ಲಿ ದೇವರ ಆರಾಧನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಹೋಬಳಿಯಾದ್ಯಂತ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಕೃತಿಯ ಹಸಿರ ಸಿರಿಯ ನಡುವೆ ಮೇಲ್ಭಾಗದಲ್ಲಿ ಉದ್ಭವ ಬಸವೇಶ್ವರ ದೇವರ ಗುಡಿಯಿದೆ. ಕೆಳಭಾಗದಲ್ಲಿ ಸಿಹಿ ನೀರಿನ ತೀರ್ಥ ಕೊಳವಿದೆ. ಇದಕ್ಕೆ ಹೊಂದಿಕೊಂಡಂತೆ ಕೆರೆ ಇದೆ. ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರು ಹೂ-ಹಣ್ಣುಕಾಯಿಯೊಂದಿಗೆ ಪೂಜೆ ಮಾಡಿಸಿ, ತೀರ್ಥದ ಕೊಳಕ್ಕೆ ಹರಕೆ ರೂಪದಲ್ಲಿ ನಾಣ್ಯ ಹಾಕಿ ಮನೆಗೆ ತೀರ್ಥ ತೆಗೆದುಕೊಂಡು ಹೋಗುತ್ತಾರೆ. ಈ ತೀರ್ಥವನ್ನು ಜಾನುವಾರುಗಳಿಗೆ ಕುಡಿಸಿದರೆ ವಿವಿಧ ಕಾಯಿಲೆ ವಾಸಿಯಾಗುವದು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಕೆಲವರು ತಮ್ಮ ಮಕ್ಕಳಿಗೆ ಮುಡಿ ತೆಗೆಸಿದರು. ಹರಕೆ ಹೊತ್ತವರು ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.