ಮಡಿಕೇರಿ, ಮಾ. 13: ಕಳೆದೆರಡು ವರ್ಷಗಳಿಂದ ಸಮಿತಿ ರಚಿಸದೆ ಆಡಳಿತಾಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಿದ್ದ ಮಡಿಕೇರಿಯ ಓಂಕಾರೇಶ್ವರ, ಆಂಜನೇಯ -ಕೋಟೆ ಗಣಪತಿ ದೇವಾಲಯಗಳಿಗೆ ಇದೀಗ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ.ರಾಜ್ಯ ಸರಕಾರ ತನ್ನ ಆಡಳಿತಾವಧಿಯ ಮುಕ್ತಾಯ ಅವಧಿಯಲ್ಲಿ, ಚುನಾವಣೆ ಸನಿಹವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ರಾಜ್ಯದ ಐತಿಹಾಸಿಕ ದೇವಾಲಯವಾದ ಓಂಕಾರೇಶ್ವರ ನಿರ್ವಹಣೆಗೆ ಸಮಿತಿ ರಚನೆ ಮಾಡಿರುವದು ಗಮನಾರ್ಹ.(ಮೊದಲ ಪುಟದಿಂದ) ಒಟ್ಟು ಒಂಭತ್ತು ಮಂದಿಯ ಸಮಿತಿಯನ್ನು ರಚಿಸಿ ರಾಜ್ಯ ಧಾರ್ಮಿಕ ಪರಿಷತ್ ಆದೇಶ ಹೊರಡಿಸಿದ್ದು ಸದಸ್ಯರುಗಳ ವಿವರ ಹೀಗಿದೆ: ಅರ್ಚಕ ವರ್ಗದಿಂದ ಪ್ರಧಾನ ಅರ್ಚಕರು ಅಥವಾ ಅರ್ಚಕರು ಸದಸ್ಯರಾಗಿರುತ್ತಾರೆ. ಪರಿಶಿಷ್ಟ ಜಾತಿ/ ಪಂಗಡದಿಂದ ಮಡಿಕೇರಿ ಹೊಸ ಬಡಾವಣೆಯ ಪಿ.ಹೆಚ್. ಸೀತಾ ಚಿಕ್ಕಣ್ಣ, ಮಹಿಳೆಯರ ಪರವಾಗಿ ಕನ್ನಂಡಬಾಣೆಯ ಕನ್ನಂಡ ಕವಿತಾ ಕಾವೇರಮ್ಮ ಹಾಗೂ ಗೌಳಿ ಬೀದಿಯ ಯು.ಸಿ.ದಮಯಂತಿ, sಸ್ಥಳೀಯ ಪ್ರವರ್ಗದಿಂದ ದೇಚೂರುವಿನ ಪುಲಿಯಂಡ ಕೆ. ಜಗದೀಶ್. ಅಲ್ಲದೆ, ಸಾಮಾನ್ಯ ಪ್ರವರ್ಗದಿಂದ ಮಹದೇವಪೇಟೆಯ ಟಿ.ಹೆಚ್. ಉದಯಕುಮಾರ್, ಪೆನ್ಶನ್ ಲೈನ್‍ನ ಟಿ.ಎಸ್. ಪ್ರಕಾಶ್ ಆಚಾರ್ಯ, ಕಾವೇರಿ ಬಡಾವಣೆಯ ಕೆ. ಎ, ಆನಂದ ಹಾಗೂ ಗೌಳಿಬೀದಿಯ ಸುನೀಲ್ ಕುಮಾರ್ ಇವರುಗಳನ್ನು ನೇಮಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.