ಮಡಿಕೇರಿ, ಮಾ. 13: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಿಲ ಗ್ರಾಮದ ಅಬ್ದುಲ್ ರಜಾಕ್ ಎಂಬವರ ಮನೆಯಲ್ಲಿ ನಡೆದ ಕಳವು ಪ್ರಕರಣ ವನ್ನು ಬೇಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ತಂಡ ಯಶಸ್ವಿಯಾಗಿದೆ.ತಾ. 3 ರಂದು ಕುಂಜಿಲ ಗ್ರಾಮದ ಅಬ್ದುಲ್ ರಜಾಕ್ ಸೌದಿ ಅರೇಬಿಯಾದಿಂದ ಬಂದು ತಮ್ಮಲ್ಲಿದ್ದಂತಹ ಹಣವನ್ನು ಗಾಡ್ರೇಜ್ ಬೀರುವಿನಲ್ಲಿಟ್ಟು, ತಾ. 4 ರಂದು ಕುಂಜಿಲ ಗ್ರಾಮದ ಸ್ವಲಾತ್ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ವಾಪಸ್ ಬಂದು ನೋಡಿದಾಗ ಬೀರುವಿನಲ್ಲಿಟ್ಟಿದ್ದ ಭಾರತದ ರೂ. 2000 ಮುಖ (ಮೊದಲ ಪುಟದಿಂದ) ಬೆಲೆಯ ಸುಮಾರು 25 ನೋಟುಗಳು ಹಾಗೂ ಸೌದಿ ಅರೇಬಿಯಾದ 6000 ರಿಯಾಲ್ ಸೇರಿದಂತೆ ಒಟ್ಟು ರೂ. 1,50,000 ನಗದು ಕಳವಾಗಿರುವದು. ಕಂಡು ಬಂದ ಮೇರೆಗೆ, ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಪೋಕ್ಲು ಪೊಲೀಸ್ ಠಾಣೆ ಮೊ.ಸಂ. 24/18 ಕಲಂ. 457, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು, ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ಹಾಗೂ ಮಡಿಕೇರಿ ಉಪಾಧೀಕ್ಷಕರವರ ನಿರ್ದೇಶನದಂತೆ ತನಿಖೆಯನ್ನು ಕೈಗೆತ್ತಿಕೊಂಡ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ನಾಪೋಕ್ಲು ಠಾಣಾ ಪಿಎಸ್‍ಐ ತಮ್ಮ ಸಿಬ್ಬಂದಿಯವರ ಸಹಾಯದಿಂದ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಮಾಲು ಸಮೇತ ಪತ್ತೆಹಚ್ಚಿ ಬಂಧಿಸಿದ್ದಾರೆ.

ಹರ್ಷದ್, ಕುಂಜಿಲದ ಮಕ್ಕಿ ಅಶ್ರಫ್ ಅವರ ಪುತ್ರ, ಪಿ.ಹೆಚ್. ತಾಹೀರ್, ಹಸನ್ ಪುತ್ರ, ಅಮೀರ್ ಸೋಹೆಲ್, ಪೊಯಿಕೆರೆ ಅಬೂಬಕರ್ ಪುತ್ರ ಅವರುಗಳನ್ನು ಬಂಧಿಸಲಾಗಿದೆ.

ಮಡಿಕೇರಿ ಉಪ-ವಿಭಾಗದ ಡಿವೈಎಸ್‍ಪಿ ಸುಂದರ್ ರಾಜ್ ಅವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಆರ್. ಪ್ರದೀಪ್, ನಾಪೋಕ್ಲು ಪೊಲೀಸ್ ಠಾಣಾ ಪಿಎಸ್‍ಐ ನಂಜುಂಡಸ್ವಾಮಿ ಹಾಗೂ ಸಿಬ್ಬಂದಿಗಳಾದ ಫ್ರಾನ್ಸಿಸ್, ನವೀನ್‍ಕುಮಾರ್, ಮಹೇಶ್, ರವಿ, ಮಂಜುನಾಥ, ಕಾಳಿಯಪ್ಪ ಹಾಗೂ ಚಾಲಕರಾದ ಸುನಿಲ್ ಮತ್ತು ಬಷೀರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.