ಮಡಿಕೇರಿ, ಮಾ. 13: ರಾಮನಗರ ಜಿಲ್ಲೆಯ ಮಾಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ಪೊಲೀಸ್ ಸಿಬ್ಬಂದಿ ಯೋರ್ವರು ರಸ್ತೆ ಅಪಘಾತದಲ್ಲಿ ಗೋವಾದಲ್ಲಿ ದುರ್ಮರಣ ಗೊಂಡಿರುವ ಘಟನೆ ನಿನ್ನೆ ಬೆಳಗ್ಗಿನ ಜಾವ ನಡೆದಿದೆ.ಮೂಲತಃ ಕೊಡಗಿನ ಮೈತಾಡಿಯ ನಿವಾಸಿ ತಟ್ಟಂಡ ನಂಜಪ್ಪ (ರಾಜ) ಹಾಗೂ ಪಾರ್ವತಿ ದಂಪತಿಯ ಪುತ್ರ ಕಾರ್ಯಪ್ಪ (38) ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ಕಾರ್ಯಪ್ಪ ಅವರು ಮಾಗಡಿ (ಮೊದಲ ಪುಟದಿಂದ) ಪೊಲೀಸ್ ಠಾಣೆಯ ಸಿಬ್ಬಂದಿ ಯಾಗಿದ್ದು, ಶನಿವಾರದಂದು ಇತರ ಮೂವರು ಸ್ನೇಹಿತರೊಂದಿಗೆ ಗೋವಾ ರಾಜ್ಯಕ್ಕೆ ರಜೆಯಲ್ಲಿ ಪ್ರವಾಸ ತೆರಳಿದ್ದರು. ವಿಮಾನದ ಮೂಲಕ ಗೋವಾಕ್ಕೆ ತೆರಳಿದ್ದ ಅವರು ನಿನ್ನೆ (ಸೋಮವಾರ) ಬೆಳಿಗ್ಗೆ ವಿಮಾನದಲ್ಲೇ ಹಿಂತಿರುಗ ಬೇಕಿತ್ತು. ಪಣಜಿಯಲ್ಲಿ ತಂಗಿದ್ದ ಇವರು ಅಲ್ಲಿಂದ ವಾಸ್ಕೋದಲ್ಲಿರುವ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 7.30ರ ವಿಮಾನವೇರಲು ವ್ಯಾಗನಾರ್ ಕಾರ್‍ನ ಮೂಲಕ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಬೆಳಿಗ್ಗೆ 5.30ರ ವೇಳೆಗೆ ಬಂಬೂಲಿಯಂ ಎಂಬಲ್ಲಿ ಆರ್ಮಿ ಟ್ರಕ್ ಒಂದಕ್ಕೆ ಕಾರು ಡಿಕ್ಕಿಯಾಗಿದ್ದು, ಕಾರ್ಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಅಲ್ಲಿನ ವ್ಯಾಪ್ತಿಯಲ್ಲಿ ಬರುವ ಅಗಸ್ತ್ಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಯುವ ಪೊಲೀಸ್ ಕೊಡಗು ಮೂಲದವರು ಎಂಬದನ್ನು ಅರಿತ ಗೋವಾದಲ್ಲಿ ನೆಲೆಸಿರುವ ಕೊಡಗಿನವರನ್ನು ಒಳಗೊಂಡ ಕೊಡಗು ಡೆತ್ ಫಂಡ್‍ನ ಸದಸ್ಯರಾದ ಎಂ.ಎನ್. ರವಿ, ಬಿ.ಎಸ್. ಬೋಪಣ್ಣ, ರತನ್ ಮತ್ತಿತರರು ಸ್ಥಳಕ್ಕೆ ತೆರಳಿ ಕಾನೂನಾತ್ಮಕ ವಿಧಿ ವಿಧಾನಗಳನ್ನು ಮುಗಿಸುವಲ್ಲಿ ನೆರವಾಗಿದ್ದಾರೆ. ಮೃತ ಕಾರ್ಯಪ್ಪ ಅವರು ಪೊಲೀಸ್ ಇಲಾಖೆಯವ ರಾದ್ದರಿಂದಲು ವಿಧಿ ವಿಧಾನಗಳು ತ್ವರಿತಗತಿಯಲ್ಲಿ ಪೂರ್ಣಗೊಂಡಿದ್ದು, ಮೃತದೇಹವನ್ನು ನಿನ್ನೆಯೇ 12.30ರ ವಿಮಾನದಲ್ಲಿ ಗೋವಾದಿಂದ ಬೆಂಗಳೂರಿಗೆ ಸಾಗಿಸಲಾಗಿತ್ತು.

ಮೃತರು ರಾಮನಗರದಲ್ಲಿನ ಯುವತಿಯನ್ನು ವಿವಾಹವಾಗಿದ್ದು, ಪೊಲೀಸ್ ಠಾಣೆ ಬಳಿ ಹಾಗೂ ಪತ್ನಿಯ ಮನೆಯಲ್ಲಿ ಇರಿಸಿ ತಾ. 13ರಂದು ಅಪರಾಹ್ನ ಹುಟ್ಟೂರಾದ ಮೈತಾಡಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಎರಡನೇ ಪುತ್ರಿ ಇತ್ತೀಚೆಗಷ್ಟೆ ಜನಿಸಿದ್ದು, ಈಕೆಯ ನಾಮಕರಣ ವನ್ನು ಮೈತಾಡಿಯ ಮನೆಯಲ್ಲಿ ತಾ. 28ರಂದು ನೆರವೇರಿಸ ಬೇಕೆಂದು ಕಾರ್ಯಪ್ಪ ಅಭಿಲಾಷೆ ಹೊಂದಿದ್ದರು ಎಂದು ಅವರ ಸ್ನೇಹಿತ ಬೇತ್ರಿಯ ಕಾಶಿ ಎಂಬವರು ‘ಶಕ್ತಿ’ಯೊಂದಿಗೆ ದುಃಖ ವ್ಯಕ್ತಪಡಿಸಿದ್ದಾರೆ.

ಕಾರ್ಯಪ್ಪ ಕಳೆದ 10 ವರ್ಷದಿಂದ ಪೊಲೀಸ್ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದರು.