ಮಡಿಕೇರಿ, ಮಾ. 13: ಚುನಾವಣೆ ಹತ್ತಿರವಾಗುತ್ತಿರುವಂತೆ ಹತ್ತು ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಇದು ಒಂದು ಪಕ್ಷದಲ್ಲಿ ಮಾತ್ರವಲ್ಲ. ಎಲ್ಲಾ ಪಕ್ಷಗಳಲ್ಲೂ ಇದ್ದದ್ದೇ. ಕೆಲವು ಬೆಳಕಿಗೆ ಬರುತ್ತವೆ. ಇನ್ನೂ ಕೆಲವು ತಿಳಿಯಾಗುತ್ತವೆ. ಮತ್ತೆ ಕೆಲವು ಕಾದಾಟದ ಹಂತ ತಲುಪುತ್ತದೆ. ಈ ರೀತಿಯ ‘ಕಾದಾಟ’ದ ಮಾದರಿಯೊಂದು ಇಂದು ನಗರದಲ್ಲಿ ತೆನೆಹೊತ್ತ ಮಹಿಳಾ ಪಕ್ಷದಲ್ಲಿ ನಡೆದು ಬಳಿಕ ತಿಳಿಯಾಯಿತಂತೆ.ಪಕ್ಷದ ಸಮಾವೇಶ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಿಗದಿಯಾಗಿತ್ತು. ಜಿಲ್ಲಾ ಅಧ್ಯಕ್ಷ, ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಮುಖರು ಭಾಗವಹಿಸಿದ್ದ ಸಭೆಯಿದು. ಈ ಸಭೆಯಲ್ಲಿ ಪಕ್ಷದ ನಗರದ (ಮೊದಲ ಪುಟದಿಂದ) ಜನಪ್ರತಿನಿಧಿಯೊಬ್ಬರು ಹಾಗೂ ಮಹಿಳಾ ಮಣಿಯೊಬ್ಬರಿಗೆ ಕಿತ್ತಾಟವಿಟ್ಟುಕೊಂಡಿತಂತೆ. ಇದು ಪರಸ್ಪರ ಹಲ್ಲೆ ತನಕವೂ ಮುಂದುವರಿಯಿತೆನ್ನಲಾಗಿದೆ. ಪ್ರಮುಖರೇ ಇದ್ದರೂ ಭರ್ಜರಿ ಮಾತಿನ ಸಮರದ ನಡುವೆ ಕಚೇರಿಯ ಶಟರ್ ಕೆಳಗಿಳಿದಿದ್ದು, ಮಾತ್ರವಲ್ಲದೆ ಮಹಿಳೆ ದೂರು ದಾಖಲಿಸುವವರೆಗೆ ಮುಂದುವರಿದಿದ್ದು, ಆಕೆಯನ್ನು ಸಮಾಧಾನಿಸಲು ಅಧ್ಯಕ್ಷರು, ಅಭ್ಯರ್ಥಿಯಾಗಿ ಪ್ರಮುಖರು ಬೆವರಿಳಿಸಿಕೊಂಡಿದ್ದಾರೆ. ಅಂತೂ ಇಂತು ಮಹಿಳೆಯರನ್ನು ಒಪ್ಪಿಸಿ ಪ್ರಕರಣವನ್ನು ನಾಲ್ಕು ಗೋಡೆಯೊಳಗೇ ಇತ್ಯರ್ಥಪಡಿಸಿ ಸುಖಾಂತ್ಯಕ್ಕೆ ತಲಪಿಸಲಾಗಿದೆ ಎಂಬದು ಇಂದು ಅಪರಾಹ್ನದ ಮಾತು.