ಮಡಿಕೇರಿ, ಮಾ. 13: ಪರಿಸರ ರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ವೈಜ್ಞಾನಿಕ-ಆವಿಷ್ಕಾರಗಳ ಮೂಲಕ ಪರಿಹಾರ ಸಾಧ್ಯವೆಂದು ಪರಿಸರವಾದಿ ಪ್ರವೀಣ್ ಭಾರ್ಗವ್ ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಇಲ್ಲಿನ ಪತ್ರಿಕಾಭವನದ ಸಭಾಂಗಣ ದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ರಕ್ಷಣೆ ಹಾಗೂ ಅಭಿವೃದ್ಧಿ ಮುಗಿಯದ ಅಧ್ಯಾಯವಾಗಿದೆ. ಪಶ್ಚಿಮ ಘಟ್ಟ ಒಂದು ಅದ್ಭುತ ನೆಲೆಯಾಗಿದ್ದು, ನಾವುಗಳು ಎಷ್ಟೇ ಗಿಡ-ಮರಗಳನ್ನು ನೆಟ್ಟರೂ ಪಶ್ಚಿಮ ಘಟ್ಟವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಅದೊಂದು ಪ್ರಕೃತಿಯ ಕೊಡುಗೆ. ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿ ಸೂತ್ರಗಳಿವೆ. ಔಷಧಿಗಳಿವೆ, ಆಹಾರ ಭದ್ರತೆಯ ನೈಸರ್ಗಿಕವಾದ ಸಂಗ್ರಹಣಾ ಕೇಂದ್ರವಾಗಿದೆ. ಸೂಕ್ಷಾಣು ಜೀವಿಗಳಿವೆ. ನೈಸರ್ಗಿಕ ಮೂಲವನ್ನು ನಶಿಸಗೊಡದೆ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಪ್ರಸ್ತುತ ಜನಸಾಂದ್ರತೆ, ಜಾನುವಾರುಗಳ ಹೆಚ್ಚಳದಿಂದ ಒತ್ತಡದಲ್ಲಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಅಡ್ಡಿಯಿಲ್ಲ; ಆದರೆ ನೀರಿಲ್ಲದೆ ಯಾವದೇ ಅಭಿವೃದ್ಧಿ ಕಾರ್ಯಗಳಾಗುವದಿಲ್ಲ. ಪರಿಸರ ರಕ್ಷಣೆಯೊಂದಿಗೆ ಅಭಿವೃದ್ಧಿ ಮಾಡಲು ಸಾಧ್ಯವಿದೆ. ರೈಲ್ವೇ, ಹೆದ್ದಾರಿ, ಬೃಹತ್ ವಿದ್ಯುತ್ ಯೋಜನೆ ಮುಂತಾದ ನೇರವಾಗಿ ಸಾಗುವ ಯೋಜನೆಗಳಿಂದ ಅರಣ್ಯ ಛಿದ್ರೀಕರಣವಾಗುತ್ತದೆ. ಇದರಿಂದ ಪಶ್ಚಿಮ ಘಟ್ಟದ ನೈಸರ್ಗಿಕ ಮೂಲ ನಶಿಸಲಿದೆ. ಕೇವಲ 5-10 ಕಿ.ಮೀ. ಯೋಜನೆಗಳಿಗೆ ಅರಣ್ಯವನ್ನು ಛಿದ್ರೀಕರಣ ಮಾಡುವದಕ್ಕಿಂತ ಬದಲಿ ವ್ಯವಸ್ಥೆ ಮೂಲಕ ಯೋಜನೆ ಕೈಗೊಳ್ಳಬಹುದಾಗಿದೆ. ಯೋಜನೆಗಳಿಗೆ ಹಣ ಇರುತ್ತದೆ.
(ಮೊದಲ ಪುಟದಿಂದ) ಮುಂದಿನ ಪೀಳಿಗೆಯ ಹಕ್ಕನ್ನು ಉಳಿಸಿಕೊಂಡು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಸೂಕ್ತ ವೇದಿಕೆ ಸಜ್ಜಾಗಬೇಕು. ಯಾವದು ಸೂಕ್ತವೆಂದು ಕಂಡು ಹಿಡಿದು ಪರಿಹಾರ ಕಂಡು ಕೊಳ್ಳಬೇಕಿದೆ. ಇದು ಹಠ ಸಾಧನೆಯ ವಿಚಾರವಲ್ಲ, ಅರಣ್ಯ ಸಂರಕ್ಷಣೆ ಮಾಡುವದು ಎಲ್ಲರ ಸಾಂವಿಧಾನಿಕ ಕರ್ತವ್ಯ; ಪರಿಸರ, ಜೀವನದಿಗಳು ಉಳಿದರೆ ಮಾತ್ರ ನಮಗೆ ಉಳಿಗಾಲ ವೆಂದು ಪ್ರತಿಪಾದಿಸಿದರು.
ಸಂಘರ್ಷ ದುರಂತ
ಜಿಲ್ಲೆಯಲ್ಲಿ ಕಂಡುಬಂದಿರುವ ಆನೆ-ಮಾನವ ಸಂಘರ್ಷ ಒಂದು ಗಂಭೀರ ಸಮಸ್ಯೆಯಾಗಿದೆ. ಇದನ್ನು ತಡೆಗಟ್ಟಲು ವನ್ಯ ಪ್ರಾಣಿಗಳ ಓಡಾಟಕ್ಕೆ ಕಾರಿಡಾರ್ ಸ್ಥಾಪನೆ ಮಾಡಿ, ಅವುಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಮಾನವ ಜೀವ ಹಾನಿಯಾಗುತ್ತಿರುವದು ದುರಂತ. ಜೀವ ಕಳೆದುಕೊಂಡರೆ ನಷ್ಟ ತುಂಬಲು ಸಾಧ್ಯವಿಲ್ಲ. ಆದರೆ ಆಸ್ತಿಗಳ ಹಾನಿಗೆ ಪರಿಹಾರ ಸಿಗುತ್ತಿದೆ. ಹೆಚ್ಚಿನ ಪರಿಹಾರಕ್ಕೆ ಒತ್ತಾಯ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೋಂಸ್ಟೇ ಮಾಡಿ
ಅರಣ್ಯದಂಚಿನಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಪ್ರದೇಶದವರು ಒಟ್ಟು ಸೇರಿ ಸಮುದಾಯ ಪ್ರವಾಸೋದ್ಯಮ ಸೃಷ್ಟಿ ಮಾಡಿಕೊಂಡು ಆದಾಯ ಹೊಂದಿಕೊಳ್ಳಬಹುದು. ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬಹುದೆಂದು ಪ್ರವೀಣ್ ಸಲಹೆ ಮಾಡಿದರು.
ಕೆರೆಯಿಂದ ದುಷ್ಪರಿಣಾಮ
ಅರಣ್ಯಕ್ಕೆ ಕೃತಕ ನೀರಿನ ಕೆರೆಗಳನ್ನು ನಿರ್ಮಿಸುತ್ತಿರುವದರಿಂದ ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಪ್ರಾಣಿಗಳು ನೈಸರ್ಗಿಕವಾಗಿ, ಸ್ವಚ್ಛಂದವಾಗಿರುತ್ತವೆ. ಅವುಗಳು ನಾವುಗಳು ಭೂಮಿಗೆ ಬರುವದಕ್ಕೆ ಮುಂಚಿತವಾಗಿ ಬಂದಿವೆ. ಆದರೆ ಇತ್ತೀಚೆಗೆ ಅರಣ್ಯ ಬೆಂಕಿಯಿಂದಾಗಿ ಅವುಗಳಿಗೆ ಬೇಕಾದ ಆಹಾರ ಸಿಗುತ್ತಿಲ್ಲ. ಪೂರಕ ಆಹಾರ ಸಿಗಬೇಕಾದರೆ ಅರಣ್ಯದಲ್ಲಿ ಗಿಡ ನೆಡುವದು, ಕೆರೆ ತೋಡುವದು ಬೇಕಾಗಿಲ್ಲ. ಬದಲಿಗೆ ಬೆಂಕಿ, ದನ ಮೇಯಿಸುವದನ್ನು, ಕಾಡು ಕಡಿಯುವದನ್ನು ತಡೆಗಟ್ಟಿದರೆ ಅರಣ್ಯ ಅಭಿವೃದ್ಧಿಯಾಗುತ್ತದೆಯೆಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಗದ್ದೆಗಳ ಪಾತ್ರ
ಜಲ ಸಂರಕ್ಷಣೆ, ಪರಿಸರ, ನದಿಮೂಲ ಸಂರಕ್ಷಣೆಯಲ್ಲಿ ಗದ್ದೆಗಳ ಪಾತ್ರ ಮಹತ್ವದ್ದಾಗಿದೆ. ಮರಳು ಕೂಡ ನದಿತಟದಲ್ಲಿ ನೀರನ್ನು ಹಿಂಗಿಸಿ ಕೊಳ್ಳುತ್ತದೆ. ಬೆಟ್ಟಗುಡ್ಡಗಳನ್ನು ಕಡಿದು ಅಭಿವೃದ್ಧಿ ಕಾರ್ಯ ಮಾಡುವ ದಕ್ಕೆ ಕಡಿವಾಣ ಹಾಕಬೇಕಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಕಸ್ತೂರಿ ರಂಗನ್
ಕಸ್ತೂರಿ ರಂಗನ್ ವರದಿಯಲ್ಲಿ 6 ರಾಜ್ಯಗಳ ಪಶ್ಚಿಮಘಟ್ಟ ಪ್ರದೇಶಗಳು ಬರುತ್ತವೆ. ಈಗಾಗಲೇ ಕೇಂದ್ರ ಕರಡು ಪ್ರತಿ ಹೊರಡಿಸಿದೆ. ಇದು ಇನ್ನೂ ಅಂತಿಮವಾಗಿಲ್ಲ. ಪರಿಸರ ಖಾತೆ ಕಾಯ್ದೆ ಪ್ರಕಾರ ಯಾರದೇ ಜಮೀನನ್ನು ವಶಕ್ಕೆ ಪಡೆಯುವ ಹಕ್ಕು ಸರಕಾರಕ್ಕಿಲ್ಲ; ಈಗಾಗಲೇ ಕೇರಳ ಹಾಗೂ ಮಹಾರಾಷ್ಟ್ರ ಕೇಂದ್ರಕ್ಕೆ ಮಾಹಿತಿ ಸಲ್ಲಿಸಿದೆ. ಆದರೆ ಕರ್ನಾಟಕ ಸರಕಾರ ಇನ್ನೂ ಸಲ್ಲಿಸಿಲ್ಲವೆಂದು ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ಕುಟ್ಟಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿಘ್ನೇಶ್ ಭೂತನಕಾಡು ಸ್ವಾಗತಿಸಿದರೆ, ಕಾರ್ಯದರ್ಶಿ ಸುಬ್ರಮಣಿ ವಂದಿಸಿದರು.