ಸೋಮವಾರಪೇಟೆ, ಮಾ. 13: ರೈತ ಪರ ಸರ್ಕಾರ ಎಂದು ಬೀಗುತ್ತಿರುವ ರಾಜ್ಯ ಸರ್ಕಾರ, ರೈತರ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದರೆ ಸಂಕಷ್ಟದಲ್ಲಿರುವ ಜಿಲ್ಲೆಯ ಕಾಫಿ ಬೆಳೆಗಾರರು ಹಾಗು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಿ ಎಂದು ಶಾಸಕ ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆಗಾರರು ನಷ್ಟ ಅನುಭವಿಸಿದ್ದು, ಕಾಫಿ ಹಾಗೂ ಕಾಳುಮೆಣಸಿನ ಬೆಲೆಯೂ ಕುಸಿದಿದೆ. ಈ ಹಿನ್ನೆಲೆ ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳಲ್ಲಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ರಂಜನ್ ಒತ್ತಾಯಿಸಿದರು.

ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕಾಂಗ್ರೆಸ್‍ನವರು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಂಜನ್, ಬೇರೆ ಬೇರೆ ರಾಜ್ಯಗಳಲ್ಲಿ ರಾಜ್ಯ ಸರ್ಕಾರವೇ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕೃಷಿಕರ ಸಾಲ ಮನ್ನಾ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತಪರ ಸರ್ಕಾರ ಎಂದು ಪ್ರಚಾರ ತೆಗೆದುಕೊಳ್ಳುತ್ತಿರುವದರಿಂದ ಸಾಲಮನ್ನಾ ಮಾಡಿ ರೈತಪರ ಕಾಳಜಿ ತೋರಿಸಲಿ. ಇದು ಅಸಾಧ್ಯವಾದರೆ ನಾವುಗಳು ಕೇಂದ್ರ ಸರ್ಕಾರಕ್ಕೆ ಒತ್ತಡ ತರುತ್ತೇವೆ ಎಂದರು.

ರೈತರು ಸಂಕಷ್ಟದಲ್ಲಿರುವದರಿಂದ ಬಡ್ಡಿ ಹಣವನ್ನು ಕಟ್ಟಿಸಿಕೊಂಡು ಸಾಲ ನವೀಕರಣ ಮಾಡಿ ರೈತರ ಸಂಕಷ್ಟಕ್ಕೆ ಬ್ಯಾಂಕ್‍ಗಳು ಸ್ಪಂದಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ರೈತರ ಸಾಲ ವಸೂಲಾತಿಗೆ ಬಲವಂತ ಮಾಡಬಾರದು ಎಂದರು.

ಕೊಡಗು ಜಿಲ್ಲೆಯಲ್ಲಿಯೇ 13 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್‍ಗಳು ರದ್ದುಗೊಂಡಿವೆ. ಇದರಿಂದಾಗಿ ಬಡ ಜನರು ಸಂಕಷ್ಟದ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ನೂರಾರು ಮಂದಿಯ ವೃದ್ಧಾಪ್ಯ ವೇತನವೂ ನಿಂತುಹೋಗಿದೆ. ಇದನ್ನು ತಕ್ಷಣ ಸರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿದ್ದ ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳು ರೈತರ ಸಾಲ ವಸೂಲಾತಿ ಮಾಡದಂತೆ ಸರ್ಕಾರ ಆದೇಶ ಹೊರಡಿಸಬೇಕು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಬಿಜೆಪಿ ರಾಜ್ಯ ಮಹಿಳಾ ಘಟಕದ ಸದಸ್ಯೆ ಸುಮಾ ಸುದೀಪ್, ಪಕ್ಷದ ಮಡಿಕೇರಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಮನುಕುಮಾರ್ ರೈ ಮತ್ತಿತರರು ಉಪಸ್ಥಿತರಿದ್ದರು.