ಮಡಿಕೇರಿ, ಮಾ. 20: ಪ್ರತೇಕ ಲಿಂಗಾಯಿತ ಧರ್ಮಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನವನ್ನು ನಿನ್ನೆ ಕೈಗೊಂಡಿದ್ದು, ಇದಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರಕಾರಕ್ಕೆ ಕಳುಹಿಸಲು ಸಜ್ಜುಗೊಂಡಿದೆ.ಕರ್ನಾಟಕ ಅಲ್ಪ ಸಂಖ್ಯಾತಾ ಕಾಯ್ದೆ ಸೆಕ್ಷನ್ 2 (ಡಿ) ಅಡಿಯಲ್ಲಿ ಲಿಂಗಾಯಿತ ಮತ್ತು ವೀರಶೈವ ಲಿಂಗಾಯಿತರಿಗೆ ಅಲ್ಪ ಸಂಖ್ಯಾತ ಮಾನ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಮಾಡಿರುವ ಶಿಫಾರಸ್ಸು ರಾಜ್ಯದಲ್ಲಿ ಹಲವು ಬೆಳವಣಿಗೆಗಳಿಗೆ ಕಾರಣವಾಗಿದೆ.ಈ ಕುರಿತಾಗಿ ಕೊಡಗು ಜಿಲ್ಲೆಯ ಈ ಜನಾಂಗದ ಹಲವು ಪ್ರಮುಖರು ವ್ಯಕ್ತಪಡಿಸಿರುವ ನಿಲುವು ಇಂತಿದೆ.
ಸರಕಾರದ ಸವಲತ್ತು ಪಡೆಯಲು ಅಲ್ಲ: ಶಾಂತಮಲ್ಲಿಕಾರ್ಜುನ ಸ್ವಾಮಿರಾಜ್ಯ ಸರಕಾರದ ನಿನ್ನೆಯ ತೀರ್ಮಾನವನ್ನು ತಾವು ಸ್ವತಃ ಹಾಗೂ ಮಠದ ಪರವಾಗಿ ಸ್ವಾಗತಿಸುವದಾಗಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಹೇಳಿದ್ದಾರೆ.
ಬಸವಣ್ಣನವರು 12ನೇ ಶತಮಾನದಲ್ಲೇ ಕ್ರಾಂತಿಕಾರಕ ನಿಲುವುಗೊಂಡಿದ್ದು, ಅನುಭವ ಮಂಟಪವನ್ನು ಸ್ಥಾಪಿಸಿದ್ದರು. ಇದನ್ನು ಜಗತ್ತಿನ ಮೊಟ್ಟ ಮೊದಲಿನ ಪಾರ್ಲಿಮೆಂಟ್ ಎಂದೂ ಬಣ್ಣಿಸಬಹುದು. ವಚನ ತತ್ವಗಳು ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ತಕ್ಕುದಾಗಿದೆ. ಇದು ಒಂದು ಜಾತಿ ಅಲ್ಲ ಧರ್ಮ. ಇದಕ್ಕೆ ಎಲ್ಲಾ ಮಾನ್ಯತೆ ಮತ್ತು ಅರ್ಹತೆ ಇದೆ ಎಂಬದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದ ಸ್ವಾಮೀಜಿಗಳು ಈ ಮಾನ್ಯತೆ ಸರಕಾರದ ಸವಲತ್ತು ಪಡೆಯಲು ಇರುವದು ಎಂಬದನ್ನು ತಾವು ಒಪ್ಪುವದಿಲ್ಲ. ಏಕೆಂದರೆ, ರಾಜ್ಯದಲ್ಲಿ ಹಲವಾರು ಮಠಗಳಿದ್ದು, ಈ ಎಲ್ಲಾ ಮಠಗಳು ಸಮಾಜಕ್ಕೆ ವಿವಿಧ ಸ್ತರಗಳಲ್ಲಿ ಉತ್ತಮ ಸೇವೆ ನೀಡುವ ಮೂಲಕ ಸರಕಾರಕ್ಕೆ ಸಹಕಾರವನ್ನು ನೀಡುತ್ತಿರುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾಜಕ್ಕೆ ಅನುಕೂಲ: ಸದಾಶಿವ ಸ್ವಾಮೀಜಿ
ವೀರಶೈವ ಹಾಗೂ ಲಿಂಗಾಯಿತ ಧರ್ಮಗಳನ್ನು ಒಟ್ಟಾಗಿ ಸೇರಿಸಿ ಶಿಫಾರಸ್ಸು ಮಾಡಿರುವ ಕ್ರಮವನ್ನು ಸ್ವಾಗತಿಸುವದಾಗಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಸಮಾಜಕ್ಕೆ ಅನುಕೂಲವೇ ಆಗಲಿದೆ ಎಂದ ಅವರು, ಸರಕಾರ ಮಾಡಿರುವ ಈ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ಅಗತ್ಯ ಒತ್ತಡ ಹೇರಲು ಸಹಕಾರ ನೀಡುವದಾಗಿ ಹೇಳಿದ್ದಾರೆ.
(ಮೊದಲ ಪುಟದಿಂದ)
ತಮ್ಮ ವಿರೋಧವಿದೆ: ಮಹಾಂತ ಸ್ವಾಮೀಜಿ
ರಾಜ್ಯ ಸರಕಾರ ವೀರಶೈವ-ಲಿಂಗಾಯಿತ ಎಂದು ವಿಭಜನೆ ಮಾಡಿದ್ದು, ಇದಕ್ಕೆ ತಮ್ಮ ವಿರೋಧವಿರುವದಾಗಿ ಕಲ್ಲುಮಠದ ಮಹಾಂತ ಸ್ವಾಮೀಜಿಗಳು ಹೇಳಿದ್ದಾರೆ. ಇದನ್ನು ಮಾಡಿದವರು ಆಮಿಷಕ್ಕೆ ಒಳಗಾಗಿದ್ದಾರೆ ಎಂದೂ ಬೇಸರ ವ್ಯಕ್ತಪಡಿಸಿರುವ ಅವರು, ಇದರ ಅಗತ್ಯವೇ ಇರಲಿಲ್ಲ. ಎಲ್ಲವೂ ಚುನಾವಣೆಗಾಗಿ ಮಾಡಿರುವ ಗಿಮಿಕ್ ಎಂದು ಕುಟುಕಿದ್ದಾರೆ. ಎರಡು ಧರ್ಮವೂ ಒಂದೇ ಎಂದು ಪ್ರತಿಪಾದಿಸಿರುವ ಮಹಾಂತ ಸ್ವಾಮಿಗಳು ಈ ನಿರ್ಧಾರದಿಂದ ರಾಜಕೀಯವಾಗಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಸದುದ್ದೇಶ ಇಲ್ಲ: ಎಸ್. ಮಹೇಶ್
ವೀರಶೈವ-ಲಿಂಗಾಯಿತ ಧರ್ಮ ಒಂದೇ ಎಂಬ ಅಭಿಪ್ರಾಯ ಎಲ್ಲರಲ್ಲಿತ್ತು. ಈಗಿರುವಾಗ ಇವೆರಡರ ವಿಭಜನೆಯ ಅಗತ್ಯವಿರಲಿಲ್ಲ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿರುವ ಎಸ್. ಮಹೇಶ್ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶರಣ ಸಾಹಿತ್ಯ ಪರಿಷತ್ ಎಲ್ಲಾ ಜಾತಿ ಜನಾಂಗದವರಿಗಿದೆ. ಈ ಹಿನ್ನೆಲೆಯಲ್ಲಿ ತಾವು ವೈಯಕ್ತಿಕ ಅಭಿಪ್ರಾಯ ನೀಡುತ್ತಿರುವದಾಗಿ ಸ್ಪಷ್ಟನೆ ನೀಡಿರುವ ಮಹೇಶ್, ಇದು ರಾಜ್ಯ ಸರಕಾರದ ವ್ಯವಸ್ಥಿತ ಸಂಚು, ಇದರಲ್ಲಿ ರಾಜಕೀಯ ಉದ್ದೇಶವಿದೆಯೇ ಹೊರತು ಸದುದ್ದೇಶ ಕಂಡುಬರುತ್ತಿಲ್ಲ. ಈ ಗೊಂದಲಗಳು ಕೊಡಗು ಜಿಲ್ಲೆಯಲ್ಲಿ ಯಾವದೇ ಪರಿಣಾಮ ಬೀರಿಲ್ಲ ಎಂದು ಮಹೇಶ್ ಹೇಳಿದ್ದಾರೆ.
ವಾದ-ವಿವಾದದಿಂದ ಚಿತ್ರಹಿಂಸೆ: ಡಿ.ಬಿ. ಧರ್ಮಪ್ಪ
ಪ್ರಸ್ತುತದ ಬೆಳವಣಿಗೆ, ವಾದ-ವಿವಾದದಿಂದ ಒಂದು ರೀತಿಯಲ್ಲಿ ಚಿತ್ರಹಿಂಸೆಯಾಗುತ್ತಿದೆ. ಈ ಬಗ್ಗೆ ಮಠಾಧೀಶರುಗಳೇ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ ಎಂದು ವೀರಶೈವ-ಲಿಂಗಾಯಿತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಬಿಜೆಪಿ ಪ್ರಮುಖರಾಗಿರುವ ಡಿ.ಬಿ. ಧರ್ಮಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಒಟ್ಟಿಗೆ ಸೇರಿ ಕಳ್ಳತನ ಮಾಡಿದಂತೆ ಸನ್ನಿವೇಶ ಸೃಷ್ಟಿಯಾಗಿದೆ ಎಂದಿರುವ ಅವರು, ಈ ಬಗ್ಗೆ ಚಕಾರವೆತ್ತಲು ನಾವು ಸಮರ್ಥರಲ್ಲ. ಪೂಜ್ಯರಾದ ಶಿವಕುಮಾರ ಸ್ವಾಮೀಜಿಗಳು ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿಸುವದಾಗಿ ಹೇಳಿದ್ದಾರೆ.
ಮೂಲ ಉದ್ದೇಶ ಈಡೇರಿಲ್ಲ: ಕೆ.ಎನ್. ವಸಂತ್
ಸರಕಾರದ ಈಗಿನ ನಿಲುವಿನಿಂದ ಮೂಲ ಉದ್ದೇಶ ಈಡೇರಿಲ್ಲ. ಇದೊಂದು ರಾಜಕೀಯ ಗಿಮಿಕ್ ಮಾದರಿಯಲ್ಲಿದೆ ಎಂದು ಪ್ರಮುಖರಾದ ಕೆ.ಎನ್. ವಸಂತ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮದಿಂದ ಬೇರೆ ಮಾಡಿರುವದು ತಪ್ಪು ಎಂದಿರುವ ಅವರು, ಮತ್ತೊಂದು ರೀತಿಯಲ್ಲಿ ಸರಕಾರದ ನಿಲುವು ಸರಿಯಾಗಿದೆ. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿತವಾಗಲಿದೆ. ಆದರೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತ ಮಾಡಿರುವದನ್ನು ಒಪ್ಪಲಾಗದು ಎಂದು ವಸಂತ್ ಹೇಳಿದ್ದಾರೆ.
ಇದು ಪ್ರಥಮ ಹೆಜ್ಜೆ: ಚಂದ್ರಮೌಳಿ
ಸರಕಾರ ನಿನ್ನೆ ಪ್ರಕಟಿಸಿರುವ ನಿಲುವು ಸ್ವಾಗತಾರ್ಹವಾಗಿದ್ದು, ಇದು ಪ್ರಥಮ ಹೆಜ್ಜೆಯಾಗಿದೆ. ಈ ಬೇಡಿಕೆ ವಿಚಾರ ಮಹತ್ವದ್ದಾಗಿದ್ದು, ಇದೀಗ ವಿಚಾರ ಅಲ್ಪಸಂಖ್ಯಾತ ಆಯೋಗದ ಮುಂದೆ ಹೋಗಿದೆ. ಇದರಿಂದ ಆರಂಭಿಕ ಕಾನೂನಿನ ತೊಡಕು ನಿವಾರಣೆಯಂತಾಗಿದ್ದು, ಆಯೋಗದ ಎದುರು ಸೂಕ್ತ ಪ್ರತಿಪಾದನೆ ಮಾಡಬೇಕಿದೆ ಎಂದು ಹಿರಿಯ ವಕೀಲ, ಕಾಂಗ್ರೆಸ್ ಪ್ರಮುಖ
ಕೆ.ಪಿ. ಚಂದ್ರಮೌಳಿ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸ್ವಾಗತಾರ್ಹ ನಿರ್ಧಾರ: ಕುಮುದಾ
ರಾಜ್ಯ ಸಚಿವ ಸಂಪುಟ ಸಿ.ಎಂ. ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ಕೈಗೊಂಡಿರುವ ನಿಲುವು ಸ್ವಾಗತಾರ್ಹವಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಹೇಳಿದ್ದಾರೆ. ಇದೊಂದು ಐತಿಹಾಸಿಕವಾದ ತೀರ್ಮಾನವಾಗಿದ್ದು, ಇದರಿಂದ ಸಮಾಜಕ್ಕೆ ಒಳಿತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರಕಾರದ ಈ ಶಿಫಾರಸ್ಸನ್ನು ಯಾವದೇ ರಾಜಕೀಯ ಕಾರಣಗಳನ್ನು ಹುಡುಕದೆ ಕೇಂದ್ರ ಸರಕಾರ ತಕ್ಷಣ ಜಾರಿಗೊಳಿಸುವ ಮೂಲಕ ಲಿಂಗಾಯಿತ ಧರ್ಮವನ್ನು ಮಾನ್ಯ ಮಾಡಬೇಕು ಎಂದು ಅವರು ಹೇಳಿದ್ದಾರೆ.